ಪಲ್ಲೆಕೆಲಯಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮಹಿಳಾ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಸಾಂಘೀಕ ಆಟದ ಮೂಲಕ ಶ್ರೀಲಂಕಾ ತಂಡವನ್ನು ಭಾರತ ಬಗ್ಗು ಬಡಿದಿದೆ. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 48.2 ಓವರುಗಳಲ್ಲಿ171 ರನ್ಗಳಿಗೆ ಆಲೌಟ್ ಆಯಿತು. ಆತಿಥೇಯ ಲಂಕಾ ಪರವಾಗಿ ಹಾಸಿನಿ ಪೆರೆರಾ 37 ಮತ್ತು ಹರ್ಷಿತಾ ಸಮರವಿಕ್ರಮ 28 ಮತ್ತು ನಿಲಾಕ್ಷಿ ಡಿ ಸಿಲ್ವಾ 43 ರನ್ಗಳಿಸಿದರು. ಭಾರತದ ಪರ ರೇಣುಕಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ 3 ವಿಕೆಟ್ ಪಡೆದರು.
ಗುರಿ ಬೆನ್ನಟ್ಟ ಹೊರಟ ಭಾರತ ಆರಂಭದಲ್ಲಿ ಸ್ಮೃತಿ ಮಂಧಾನ (4 ರನ್) ವಿಕೆಟ್ ಕಳೆದುಕೊಂಡಿತು. ಯಸ್ತಿಕಾ ಭಾಟಿಯಾ ಕೂಡ 1 ರನ್ಗಳಿಸಿ ಔಟಾದರು. ಆದರೆ ಶಫಾಲಿ ವರ್ಮಾ ಮತ್ತು ನಾಯಕಿ ಹರ್ಮನ್ ಪ್ರಿತ್ ಕೌರ್ ಉತ್ತಮ ಜೊತೆಯಾಟ ಕಟ್ಟಿದರು. ಶಫಾಲಿ 35 ರನ್ಗಳಿಸಿದರೆ, ಕೌರ್ 44 ರನ್ಗಳಿಸಿದರು.
ಹರ್ಲಿನ್ ಡಿಯೋಲ್ ಅತ್ಯಮೂಲ್ಯ 34 ರನ್ಗಳಿಸಿ ಮಧ್ಯಮ ಸರದಿಯಲ್ಲಿ ತಂಡಕ್ಕೆ ಆಧಾರವಾದರು. ಕೊನೆಯಲ್ಲಿ ದೀಪ್ತಿ ಶರ್ಮಾ ಅಜೇಯ 22 ಮತ್ತು ಪೂಜಾ ವಸ್ತ್ರಾರ್ಕರ್ ಅಜೇಯ 21 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಭಾರತ 38 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 4 ವಿಕೆಟ್ಗಳ ಜಯ ಸಾಧಿಸಿತು.