ಢಾಕಾ: ಏಷ್ಯನ್ ಚಾಂಪಿಯನ್ ಶಿಪ್ ಹಾಕಿ ಟೂರ್ನಿಯಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿದ್ದು, ಪಾಕಿಸ್ತಾನ ತಂಡವನ್ನು ಮಣಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಜಪಾನ್ ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಪಂದ್ಯದಲ್ಲಿ ಭಾರತ ಕಂಚಿನ ಪಡೆದು ಐತಿಹಾಸಿಕ ಸಾಧನೆ ಮಾಡಿತ್ತು.
ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಭಾರತ 4-3 ರಿಂದ ಪಾಕ್ ತಂಡವನ್ನು ಮಣಿಸಿ ಅಬ್ಬರಿಸಿತು. ಭಾರತದ ಪರ ಹರ್ಮನ್ ಪ್ರೀತ್ (2ನೇ ನಿಮಿಷ), ಸುಮಿತ್ (45ನೇ ನಿಮಿಷ), ವರುಣ್ (53ನೇ ನಿಮಿಷ), ಆಕಾಶ್ ದೀಪ್ (56ನೇ ನಿಮಿಷ) ಗೋಲು ಸಿಡಿಸಿ ಜಯದಲ್ಲಿ ಮಿಂಚಿದರು. ಪಾಕ್ ಪರ ಅರ್ಫಾಜ್ (10ನೇ ನಿಮಿಷ), ಅಬ್ದುಲ್ ರಾಣಾ (33ನೇ ನಿಮಿಷ), ನದೀಮ್ (57ನೇ ನಿಮಿಷ) ಗೋಲು ಸಿಡಿಸಿದರು.
ಮೊದಲಾವಧಿಯ ಆರಂಭದಲ್ಲೇ ಭಾರತ ಸೊಗಸಾದ ಆಟದ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯಿತು. ಲೀಗ್ ಹಂತದಲ್ಲಿ ಪಾಕ್ ತಂಡವನ್ನು ಸೋಲಿಸಿದ್ದ ಭಾರತ, ಆತ್ಮವಿಶ್ವಾಸದಿಂದಲೇ ಅಖಾಡಕ್ಕೆ ಇಳಿಯಿತು. ಅಲ್ಲದೆ ಪಂದ್ಯದ ಎರಡನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಸಿಂಗ್ ಗೋಲು ಸಿಡಿಸಿ ಮಿಂಚಿದರು.
ಇದೇ ಅವಧಿಯಲ್ಲಿ ಪಾಕ್ ಪರ ಅರ್ಫಾಜ್ ಗೋಲು ಸಿಡಿಸಿ ಗೋಲುಗಳ ಅಂತರವನ್ನು ಸಮನಾಗಿಸಿದರು. ಎರಡನೇ ಅವಧಿಯಲ್ಲಿ ಉಭಯ ತಂಡದ ಆಟಗಾರರು ಗೋಲು ಬಾರಿಸುವಲ್ಲಿ ವಿಫಲರಾಗಿದ್ದರಿಂದ ಗೋಲುಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ.
ಮೂರನೇ ಅವಧಿಯ ಆರಂಭದಲ್ಲಿ ಪಾಕ್ ಪರ ಅಬ್ದುಲ್ ರಾಣಾ ಸೊಗಸಾದ ಗೋಲು ಬಾರಿಸಿ ಅಂತರವನ್ನು ಹಿಗ್ಗಿಸಿತು. ಇದೇ ಅವಧಿಯಲ್ಲಿ ಪಾಕ್ ಗೆ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡು ಅಂಕ ಹೆಚ್ಚಿಸುವಲ್ಲಿ ವಿಫಲವಾಯಿತು. ಇದೇ ಅವಧಿಯಲ್ಲಿ ಭಾರತದ ಪರ ಸುಮಿತ್ ಗೋಲು ಸಿಡಿಸಿ ಅಂತರವನ್ನು ಸಮನಾಗಿಸಿದರು. ಪರಿಣಾಮ ಮೂರನೇ ಅವಧಿಯ ಮುಕ್ತಾಯಕ್ಕೆ ಭಾರತ 2-2 ರಿಂದ ಸಮನಾಗಿಸಿತು.
ಉಭಯ ತಂಡಗಳು ಮೂರು ಅವಧಿಯಲ್ಲಿ ಸಮಬಲದ ಆಟ ಪ್ರದರ್ಶಿಸಿದ್ದರಿಂದ ಕೊನೆಯ ಹಂತದ ಆಟದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಈ ಅವಧಿಯಲ್ಲಿ ವರುಣ್ ಕುಮಾರ್ 53ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ದಾಖಲಿಸಿದರು. ಇದೇ ಅವಧಿಯಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸುವಲ್ಲಿ ಹಿಂದೆ ಬಿದ್ದಿತು.
55ನೇ ನಿಮಿಷದಲ್ಲಿ ಭಾರತದ ಪರ ಮನ್ ಪ್ರೀತ್ ಸಿಂಗ್ ಎದುರಾಳಿ ಗೋಲು ಬಾರಿಸುವ ಆಸೆಯನ್ನು ತೆಡೆಯಿತು.
57ನೇ ನಿಮಿಷದಲ್ಲಿ ಪಾಕಿಸ್ತಾನದ ಪರ ನದೀಮ್ ಆರ್ಕಷಕ ಗೋಲು ಸಿಡಿಸಿದರು. ಪಾಕಿಸ್ತಾನ ಪಂದ್ಯದಲ್ಲಿ ಪುಟಿದೇಳುವ ಸೂಚನೆ ನೀಡಿತು. ಆದರೆ ಮುಂದಿನ ಕ್ಷಣದಲ್ಲಿ ಭಾರತ ಆರ್ಭಟಿಸಿತು.
58ನೇ ನಿಮಿಷದಲ್ಲಿ ಭಾರತದ ಪರ ಆಕಾಶ್ ದೀಪ್ ಸಿಂಗ್ ಸೊಗಸಾದ ಫೀಲ್ಡ್ ಗೋಲ್ ಬಾರಿಸುವ ಮೂಲಕ ಮುನ್ನಡೆ ಸಾಧಿಸಿತು. ಭಾರತ 4-3 ರಿಂದ ಮುನ್ನಡೆಯಿತು.