ಟೀಮ್ ಇಂಡಿಯಾಗೆ ಜಯದ ‘ಶ್ರೇಯ’
ಭರವಸೆಯ ಆಟಗಾರರಾದ ಇಶಾನ್ ಕಿಶನ್ (93 ರನ್) ಹಾಗೂ ಶ್ರೇಯಸ್ ಅಯ್ಯರ್ (ಅಜೇಯ 113 ರನ್) ಇವರುಗಳ ಸೊಗಸಾದ ಆಟದ ಪ್ರದರ್ಶನದಿಂದ ಟೀಮ್ ಇಂಡಿಯಾ ರಾಂಚಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಈ ಮೂಲಕ ಟೀಮ್ ಇಂಡಿಯಾ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ದಕ್ಷಿಣ ಆಫ್ರಿಕಾ ಪರ ಇನ್ನಿಂಗ್ಸ್ ಆರಂಭಿಸಿದ ಅನುಭವಿ ಕ್ವಿಂಟನ್ ಡಿಕಾಕ್ ಹಾಗೂ ಜನೆಮನ್ ಮಲನ್ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. 40 ರನ್ ಗಳಿಗೆ ಪ್ರವಾಸಿ ತಂಡ ಎರಡು ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ತಂಡಕ್ಕೆ ರಿಜಾ ಹೆಂಡ್ರಿಕ್ಸ್ ಹಾಗೂ ಐಡೆನ್ ಮಾರ್ಕ್ರಮ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 129 ಎಸೆತಗಳಲ್ಲಿ ಇಷ್ಟೇ ರನ್ ಸೇರಿಸಿತು. ರಿಜಾ 76 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಾಯದಿಂದ 74 ರನ್ ಸಿಡಿಸಿದರು.
ನಾಲ್ಕನೇ ವಿಕೆಟ್ ಗೆ ಹೆನ್ರಿ ಕ್ಲಾಸೇನ್ ಹಾಗೂ ಮಾರ್ಕ್ರಮ್ ಜೊತೆಗೂಡಿ 40 ಎಸೆತಗಳಲ್ಲಿ 46 ರನ್ ಸೇರಿಸಿತು. ಕ್ಲಾಸೇನ್ 30 ರನ್ ಬಾರಿಸಿದರು. ಇನ್ನು ಸೊಗಸಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಐಡೆನ್ ಮಾರ್ಕ್ರಮ್ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 79 ರನ್ ಕಲೆ ಹಾಕಿದರು.

ಡೇವಿಡ್ ಮಿಲ್ಲರ್ ಅಜೇಯ 35 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 278 ರನ್ ಸೇರಿಸಿತು.

ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 3, ವಾಶಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಕಬಳಿಸಿದರು.
ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಆರಂಭಿಕರಾದ ನಾಯಕ ಶಿಖರ್ ಧವನ್ (13), ಶುಭಮನ್ ಗಿಲ್ (28) ರನ್ ಕಲೆ ಹಾಕುವಲ್ಲಿ ವಿಫಲರಾದರು.

ಮೂರನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಜೊತೆಗೂಡಿ ತಂಡಕ್ಕೆ ನೆರವಾದರು. ಈ ಜೋಡಿಯನ್ನು ಕಟ್ಟಿ ಹಾಕಲು ದಕ್ಷಿಣ ಆಫ್ರಿಕಾ ಮಾಡಿಕೊಂಡ ಪ್ಲಾನ್ ಎಲ್ಲ ಕೈ ಕೊಟ್ಟಿತು. ಈ ಜೋಡಿ 155 ಎಸೆತಗಳಲ್ಲಿ 161 ರನ್ ಸೇರಿಸಿತು. ಅಬ್ಬರದ ಆಟವನ್ನು ಆಡುತ್ತಿದ್ದ ಇಶಾನ್ ಕಿಶನ್ ಆಟ 93 ರನ್ ಗಳಿಗೆ ಕೊನೆಯಾಯಿತು. ಇವರ ಇನ್ನಿಂಗ್ಸ್ ನಲ್ಲಿ 4 ಬೌಂಡರಿ, 7 ಸಿಕ್ಸರ್ ಸೇರಿವೆ.
ನಾಲ್ಕನೇ ವಿಕೆಟ್ ಗೆ ಶ್ರೇಯಸ್ ಹಾಗೂ ಸಂಜು ಸ್ಯಾಮ್ಸನ್ (ಅಜೇಯ 30) ಜೊತೆಗೂಡಿ 69 ಎಸೆತಗಳಲ್ಲಿ ಅಜೇಯ 73 ರನ್ ಸಿಡಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.

ಮಧ್ಯಮ ಕ್ರಮಾಂಕದ ಶ್ರೇಯಸ್ ಅಯ್ಯರ್ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಿದರು. ಇವರು 15 ಬೌಂಡರಿ ನೆರವಿನಿಂದ ಅಜೇಯ 113 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಅಂತಿಮವಾಗಿ ಟೀಮ್ ಇಂಡಿಯಾ 45.5 ಓವರ್ ಗಳಲ್ಲಿ 3 ವಿಕೆಟ್ ಗೆ 282 ರನ್ ಸೇರಿಸಿ ಜಯ ಸಾಧಿಸಿತು.
IND VS SA ODI, Shreyas Iyer, Team India, South Africa