ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಭರ್ಜರಿ ಆರಂಭವನ್ನು ಮಾಡಿತು. ನಾಯಕ ರೋಹಿತ್ ಶರ್ಮಾ ಹಾಗೂ ಭರವಸೆಯ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಈ ಜೋಡಿಯನ್ನು ಕಟ್ಟಿ ಹಾಕಲು ದಕ್ಷಿಣ ಆಫ್ರಿಕಾ ಮಾಡಿಕೊಂಡ ಯೋಜನೆ ಕೆಳಗೆಳಗಾಯಿತು. ಈ ಜೋಡಿ 9.5 ಓವರ್ ಗಳಲ್ಲಿ 96 ರನ್ ಗಳ ಸೊಗಸಾದ ಜೊತೆಯಾಟವನ್ನು ನೀಡಿತು. ರೋಹಿತ್ 43 ರನ್ ಬಾರಿಸಿ ಕೇಶವ್ ಮಹರಾಜ್ ಗೆ ವಿಕೆಟ್ ಒಪ್ಪಿಸಿದರು.
ಆರಂಭಿಕ ಕೆ.ಎಲ್ ರಾಹುಲ್ 28 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 57 ರನ್ ಬಾರಿಸಿ ಮಹರಾಜ್ ಗೆ ವಿಕೆಟ್ ಒಪ್ಪಿಸಿದರು.
ಮೂರನೇ ವಿಕೆಟ್ ಗೆ ವಿರಾಟ್ ಕೊಹ್ಲಿ ಜೊತೆಗೂಡಿದ ಮಿಸ್ಟರ್ 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಯಾದವ್ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ 42 ಎಸೆತಗಳಲ್ಲಿ 102 ರನ್ ಸೇರಿಸಿತು. ಈ ಜೊತೆಯಾಟದಲ್ಲಿ ಸೂರ್ಯ ಸಿಂಹಪಾಲು ರನ್ ಸಿಡಿಸಿದರು. ಸೂರ್ಯ 22 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ನೆರವಿನಿಂದ 61 ರನ್ ಸಿಡಿಸಿ ಅಬ್ಬರಿಸಿದರು.
ವಿರಾಟ್ ಕೊಹ್ಲಿ ಅಜೇಯ 49 ರನ್ ಹಾಗೂ ದಿನೇಶ್ ಕಾರ್ತಿಕ್ ಅಜೇಯ 17 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿತು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್ ಗಳಲ್ಲಿ 3 ವಿಕೆಟ್ ಗೆ 237 ರನ್ ಕಲೆ ಹಾಕಿತು. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹರಾಜ್ ಎರಡು ವಿಕೆಟ್ ಪಡೆದರು.
ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಕಳಪೆಯಾಗಿತ್ತು. ಕೇವಲ 1 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು.
ಮೂರನೇ ವಿಕೆಟ್ ಗೆ ಡಿಕಾಕ್ ಹಾಗೂ ಐಡೆನ್ ಮಾರ್ಕ್ರಾಮ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 46 ರನ್ ಸೇರಿಸಿತು. ಐಡೆನ್ ಮಾರ್ಕ್ರಾಮ್ 33 ರನ್ ಸಿಡಿಸಿ ಅಕ್ಷರ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು.
ನಾಲ್ಕನೇ ವಿಕೆಟ್ ಗೆ ಡಿಕಾಕ್ ಹಾಗೂ ಡೇವಿಡ್ ಮಿಲ್ಲರ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಆದರೂ ಈ ಜೋಡಿ ತಂಡಕ್ಕೆ ಗೆಲುವಿನ ಹಾರ ತೊಡಿಸುವಲ್ಲಿ ವಿಫಲವಾಯಿತು. ಈ ಜೋಡಿ 84 ಎಸೆತಗಳಲ್ಲಿ 174 ರನ್ ಸಿಡಿಸಿತು. ಡೇವಿಡ್ ಮಿಲ್ಲರ್ 47 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್ ಸಹಾಯದಿಂದ 106 ರನ್ ಬಾರಿಸಿ ಸೋಲಿನಲ್ಲಿ ಮಿಂಚಿದರು.

ಆರಂಭಿಕ ಡಿಕಾಕ್ 48 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ನೆರವಿನಿಂದ ಅಜೇಯ 69 ಸಿಡಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 221 ರನ್ ಕಲೆ ಹಾಕಿತು.
IND VS SA, India, South Africa, Sports, T-20