ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಮೂರನೇ ಟಿ-20 ಪಂದ್ಯವನ್ನು 49 ರನ್ ಗಳಿಂದ ಗೆದ್ದುಕೊಂಡಿದೆ. ಟೀಮ್ ಇಂಡಿಯಾ ಮೂರನೇ ಟಿ-20 ಪಂದ್ಯದಲ್ಲಿ ಸೋತರೂ ಸರಣಿಯನ್ನು 2-1ರಿಂದ ವಶಕ್ಕೆ ಪಡೆದಿದೆ.
ವಿಶ್ವಕಪ್ ಅಭ್ಯಾಸದ ಕೊನೆಯ ಪಂದ್ಯ ಎಂದೇ ಬಿಂಬಿತವಾಗಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ ಹಲವು ಬದಲಾವಣೆ ಮಾಡಿ ಕೈಸುಟ್ಟುಕೊಂಡಿದೆ. ದಕ್ಷಿಣ ಆಫ್ರಿಕಾ ಪರ ರಿಲೀ ರೋಸೌವ್ ಶತಕ ಬಾರಿಸಿದರೆ, ಅನುಭವಿ ಬೌಲರ್ ಗಳು ವಿಕೆಟ್ ಬೇಟೆ ನಡೆಸಿದ್ದು, ಜಯದಲ್ಲಿ ಮಿಂಚಿದ್ದಾರೆ.
ಇಂದೋರ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾದ ಆರಂಭ ಕಳಪೆಯಾಗಿತ್ತು. ನಾಯಕ ತೆಂಬು ಬವುಮಾ ನಿರಾಸೆ ಅನುಭವಿಸಿದರು.
ಎರಡನೇ ವಿಕೆಟ್ ಗೆ ಕ್ವಿಂಟನ್ ಡಿಕಾಕ್ ಹಾಗೂ ರಿಲೀ ರೋಸೌವ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಮೂಲಕ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಯಿತು. ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಜೋಡಿ ರನ್ ಗಳನ್ನು ಕಲೆ ಹಾಕುತ್ತಾ ಸಾಗಿತು. ಈ ಜೋಡಿ ಬಿರುಸಿನ ಆಟಕ್ಕೆ ಮಣೆ ಹಾಕಿತು. ಪರಿಣಾಮ 47 ಎಸೆತಗಳಲ್ಲಿ ಈ ಜೋಡಿ 89 ರನ್ ಚಚ್ಚಿತು.
ಈ ಹಂತದಲ್ಲಿ ಇಲ್ಲದ ರನ್ ಕದಿಯಲು ಹೋಗಿ ಕ್ವಿಂಟನ್ ಡಿಕಾಕ್ ಔಟ್ ಆದರು. ಇವರು 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ 68 ರನ್ ಬಾರಿಸಿದರು.
ಈ ಹಂತದಲ್ಲಿ ತಂಡಕ್ಕೆ ರಿಲೀ ರೋಸೌವ್ ಹಾಗೂ ಆಧಾರವಾದರು. ಈ ಜೋಡಿಯನ್ನು ಬೇರ್ಪಡಿಸಲು ಟೀಮ್ ಇಂಡಿಯಾ ಮಾಡಿಕೊಂಡ ಯೋಜನೆ ಕೈ ಕೊಟ್ಟಿತು. ಮೂರನೇ ವಿಕೆಟ್ ಗೆ ಈ ಜೋಡಿ 87 ರನ್ ಗಳ ಕಾಣಿಕೆ ನೀಡಿತು. ರಿಲೀ ರೋಸೌವ್ 23 ರನ್ ಬಾರಿಸಿ ಚಹಾರ್ ಎಸೆತದಲ್ಲಿ ಔಟ್ ಆದರು.
ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ರಿಲೀ ರೋಸೌವ್ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿಸಿದರು. ಇವರ ಸೊಗಸಾದ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ಸೇರಿವೆ. ಅಲ್ಲದೆ ಇದೇ ಮೊದಲ ಬಾರಿಗೆ ಚುಟುಕು ಕ್ರಿಕೆಟ್ ನಲ್ಲಿ ಮೂರುಂಕಿ ಮುಟ್ಟಿ ಸಂಭ್ರಮಿಸಿದರು.
ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 3 ವಿಕೆಟ್ ಗೆ 227 ರನ್ ಸೇರಿಸಿತು.
ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ರೋಹಿತ್ ಶರ್ಮಾ ನಿರಾಸೆ ಅನುಭವಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಶ್ರೇಯಸ್ ಅಯ್ಯರ್ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲರಾದರು. ಕೇವಲ 4 ರನ್ ಆಗುವಷ್ಟರಲ್ಲಿ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡಿತು.
ಮೂರನೇ ವಿಕೆಟ್ ಗೆ ಆರಂಭಿಕ ರಿಷಭ್ ಪಂತ್ ಅವರನ್ನು ಸೇರಿಕೊಂಡ ಭರವಸೆಯ ಆಟಗಾರ ದಿನೇಶ್ ಕಾರ್ತಿಕ್ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಈ ಜೋಡಿ 41 ರನ್ ಸಿಡಿಸಿತು. ಆರಂಭಿಕರಾಗಿ ಕಣಕ್ಕೆ ಇಳಿದ ರಿಷಭ್ ಪಂತ್ (27 ರನ್) ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಇವರ ಆಟಕ್ಕೆ ಎನ್ ಗಿಡಿ ತೆರೆ ಎಳೆದರು.
ನಾಲ್ಕನೇ ವಿಕೆಟ್ ಗೆ ದಿನೇಶ್ ಹಾಗೂ ಸೂರ್ಯಕುಮಾರ್ ಜೋಡಿ ಸಹ 33 ರನ್ ಸೇರಿಸಿತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಆಘಾತ ಅನುಭವಿಸಿದರು.
9ನೇ ವಿಕೆಟ್ ಗೆ ಉಮೇಶ್ ಯಾದವ್ (ಅಜೇಯ 20) ಹಾಗೂ ದೀಪಕ್ ಚಹಾರ್ (31 ರನ್) ಜೋಡಿ 48 ರನ್ ಸೇರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿತು. ಅಂತಿಮವಾಗಿ ಟೀಮ್ ಇಂಡಿಯಾ 18.3 ಓವರ್ ಗಳಲ್ಲಿ 178 ರನ್ ಗಳಿಗೆ ಸರ್ವಪತನ ಹೊಂದಿತು.
ದಕ್ಷಿಣ ಆಫ್ರಿಕಾ ಪರ ಡ್ವೈನ್ ಪ್ರಿಟೋರಿಯಸ್ 3, ವೇನ್ ಪರ್ನೆಲ್, ಲುಂಗಿ ಎನ್ ಗಿಡಿ, ಕೇಶವ್ ಮಹಾರಾಜ್ ತಲಾ ಎರಡು ವಿಕೆಟ್ ಪಡೆದರು.
Ind Vs Sa, India, South Africa, Rilee Rossouw, T-20