IND VS PAK: ಹಾರ್ದಿಕ್ ಪಾಂಡ್ಯ ಅಬ್ಬರ, ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಭಾನುವಾರ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದ್ದು, ಪಾಕಿಸ್ತಾನ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿದೆ. ಪಂದ್ಯದಲ್ಲಿ ಸೊಗಸಾದ ಬೌಲಿಂಗ್ ಹಾಗೂ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ಗೆಲುವಿನಲ್ಲಿ ಮಿಂಚಿದರು. ಈ ಮೂಲಕ ಟೀಮ್ ಇಂಡಿಯಾ ಏಷ್ಯಾ ಕಪ್ ಟಿ-20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಎಲ್ಲರ ಚಿತ್ತ ಕದ್ದಿದ್ದ ಭಾರತ-ಪಾಕ್ ಪಂದ್ಯದಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿದ ಭಾರತ ಅರ್ಹ ಗೆಲುವು ದಾಖಲಿಸಿದೆ. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕ್ 19.5 ಓವರ್ ಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 19.4 ವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಕಳೆದ ವರ್ಷ ಐಸಿಸಿ ವಿಶ್ವಕಪ್ ನಲ್ಲಿ ಕಂಡ ಸೋಲಿನ ಕಹಿಯನ್ನು ಅಭಿಮಾನಿಗಳು ಮರೆಯುವಂತೆ ಮಾಡಿದೆ.
ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆರಿಸಿಕೊಂಡಿತು. ಮೊದಲ ಓವರ್ ನಲ್ಲಿ ಭುವನೇಶ್ವರ್ ಕುಮಾರ್ ಮೊದಲ ಓವರ್ ನಲ್ಲಿ ಮೊಹಮ್ಮದ್ ರಿಜ್ವಾನ್ ವಿರುದ್ಧ 2 ರಿವೀವ್ಯೂ ತೆಗೆದುಕೊಂಡಾಗಿತ್ತು. ಆದರೆ ರಿಜ್ವಾನ್ ಇದರಲ್ಲಿ ಬಚಾವಾಗಿದ್ದರು. ಆದರೆ ನಾಯಕ ಬಾಬರ್ ಅಜಂ 10 ರನ್ ಗಳಿಸಿದ್ದಾಗ ಭುವನೇಶ್ವರ್ ಗೆ ವಿಕೆಟ್ ಒಪ್ಪಿಸಿದರು. ಫಖರ್ ಜಮಾನ್ ಕೂಡ 10 ರನ್ ಗಳಿಸಿ ಆವೇಶ್ ಖಾನ್ ಗೆ ಬಲಿಯಾದರು.
ರಿಜ್ವಾನ್ ಮತ್ತು ಇಫ್ತಿಕಾರ್ ನಡುವೆ 45 ರನ್ ಗಳ ಜೊತೆಯಾಟ ಬಂದಾಗ ಭಾರತ ತಂಡಕ್ಕೆ ಸಣ್ಣ ಟೆನ್ಷನ್ ಆಗಿತ್ತು. ಆದರೆ ಹಾರ್ದಿಕ್ ಪಾಂಡ್ಯಾ 28 ರನ್ ಗಳಿಸಿದ್ದ ಇಫ್ತಿಕರ್ ಅವರನ್ನು ಔಟ್ ಮಾಡಿದರು. 42 ಎಸೆತಗಳಲ್ಲಿ 43 ರನ್ ಗಳಿಸಿದ್ದ ರಿಜ್ವಾನ್ ಮತ್ತು 2 ರನ್ ಗಳಿಸಿದ್ದ ಕುಶ್ದಿಲ್ ಶಾ ಹಾರ್ದಿಕ್ ಗೆ ಒಂದೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು.
ಸ್ಲಾಗ್ ಓವರ್ ನ ಆರಂಭದಲ್ಲೇ ಭುವನೇಶ್ವರ್ ಕುಮಾರ್ 9 ರನ್ ಗಳಿಸಿದ್ದ ಬಿಗ್ ಹಿಟ್ಟರ್ ಆಸಿಫ್ ಅಲಿ ವಿಕೆಟ್ ಹಾರಿಸಿದರು. 1 ರನ್ ಗಳಿಸಿದ್ದ ಮೊಹಮ್ಮದ್ ನವಾಜ್ ಅರ್ಶದೀಪ್ ಸಿಂಗ್ ಗೆ ವಿಕೆಟ್ ಒಪ್ಪಿಸಿದರು. ಭುವಿ ಶದಾಬ್ ಖಾನ್ ಆಟಕ್ಕೆ ಮಂಗಳಹಾಡಿದರು. ಮುಂದಿನ ಎಸೆತದಲ್ಲಿ ಖಾತೆ ತೆರಯದ ನಸೀಮ್ ಶಾ ಕೂಡ ಔಟಾದರು. ಧಹಾನಿ ಭುವಿಗೆ ಹ್ಯಾಟ್ರಿಕ್ ನಿರಾಕರಿಸಿದರು. ಅಷ್ಟೇ ಅಲ್ಲ ಕೊನೆಯ ಓವರ್ ನಲ್ಲಿ ಸಿಕ್ಸರ್ ಸಿಡಿಸಿ ಪಾಕ್ ಸ್ಕೋರ್ ಹೆಚ್ಚಿಸಿದರು. ಆದರೆ ಅರ್ಶದೀಪ್ ಅವರನ್ನು ಕ್ಲೀನ್ಬೌಲ್ಡ್ ಮಾಡಿದರು. ಪಾಕ್ 19.5 ಓವರುಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಭುವನೇಶ್ವರ್ 26 ರನ್ ಗೆ 4 ವಿಕೆಟ್ ಪಡೆದರೆ, ಹಾರ್ದಿಕ್ 3 ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ಭಾರತದ ಆರಂಭ ಕಳಪೆಯಾಗಿತ್ತು. ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ನಾಸೀಮ್ ಶಾ ಅವರ ಎಸೆತವನ್ನು ದಂಡಿಸಲು ಹೋಗಿ ಚೆಂಡು, ಬ್ಯಾಟಿನ ಅಂಚಿನ ಮುಟ್ಟಿ ಸ್ಟಂಪ್ ಗೆ ಮುಟ್ಟಿತು.
ಕೇವಲ ಒಂದು ರನ್ ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಪಿಚ್ ಮರ್ಮ ಅರಿತು ಬ್ಯಾಟ್ ಮಾಡಿದ ಜೋಡಿ ಪಾಕ್ ಬೌಲರ್ ಗಳನ್ನು ದಂಡಿಸಿತು. ಅಗತ್ಯ ರನ್ ಗಳನ್ನು ಕಲೆ ಹಾಕುತ್ತಾ ಸಾಗಿದ ಜೋಡಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿತು. ಈ ಜೋಡಿ 49 ರನ್ ಗಳ ಜೊತೆಯಾಟವನ್ನು ನೀಡಿತು.
ರೋಹಿತ್ ಶರ್ಮಾ 12 ರನ್ ಬಾರಿಸಿದ್ದಾಗ ಮೊಹಮ್ಮದ್ ನವಾಜ್ ಅವರ ಎಸೆತದಲ್ಲಿ ಅಹ್ಮದ್ ಗೆ ಕ್ಯಾಚ್ ನೀಡಿದರು.
ಟೀಮ್ ಇಂಡಿಯಾದ ಭರವಸೆಯ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಈ ಪಂದ್ಯ ಮಹತ್ವದಾಗಿತ್ತು. ವಿರಾಟ್ ಅವರು ಈ ಪಂದ್ಯದ ಮೂಲಕ 100ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ವಿರಾಟ್ ಸೊಗಸಾಗಿ ಬ್ಯಾಟಿಂಗ್ ಮಾಡಿದರು. ಆದರೆ 35 ರನ್ ಬಾರಿಸಿದ್ದಾಗ ನವಾಜ್ ಎಸೆತದಲ್ಲಿ ಲಾಂಗ್ ಆಫ್ ನಲ್ಲಿ ಅಹ್ಮದ್ ಗೆ ಕ್ಯಾಚ್ ನೀಡಿದರು.
ಭರವಸೆಯ ಆಟಗಾರ ಸೂರ್ಯಕುಮಾರ್ ಯಾದವ್ 18 ರನ್ ಗಳಿಗೆ ಆಟ ಮುಗಿಸಿದರು.
ಮಹತ್ವದ ಪಂದ್ಯದಲ್ಲಿ ಎಡಗೈ ಆಟಗಾರ ರವೀಂದ್ರ ಜಡೇಜಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಇವರು ತಮ್ಮ ಸ್ಥಾನದ ಮಹತ್ವವನ್ನು ಅರಿತು ಬ್ಯಾಟ್ ಮಾಡಿ ತಂಡಕ್ಕೆ ಆಧಾರವಾದ ಜಡ್ಡು ಅಬ್ಬರಿಸಿದರು. ಅಲ್ಲದೆ ಐದನೇ ವಿಕೆಟ್ ಗೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೂಡಿ 29 ಎಸೆತಗಳಲ್ಲಿ 52 ರನ್ ಗಳ ಜೊತೆಯಾಟ ನೀಡಿದರು. ತಂಡ ಗೆಲುವಿನ ಅಂಚಿನಲ್ಲಿ ಬಂದು ನಿಂತಾಗ ರವೀಂದ್ರ ಜಡೇಜಾ 35 ರನ್ ಬಾರಿಸಿ ಮೊಹಮ್ಮದ್ ನವಾಜ್ ಗೆ ವಿಕೆಟ್ ಒಪ್ಪಿಸಿದರು.
ಹಾರ್ದಿಕ್ ಪಾಂಡ್ಯ ಸೊಗಸಾದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರು ಕೇವಲ 17 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 33 ರನ್ ಬಾರಿಸಿ ತಂಡಕ್ಕೆ ನೆರವಾದರು.
IND VS PAK, Team India, Asia cup, Pakistan