ಇದು ಸೂಪರ್ ಸಂಡೇಯ ಸಖತ್ ಮ್ಯಾಚ್. ಜಗತ್ತಿನ ಎಲ್ಲಾ ಕಣ್ಣುಗಳನ್ನು ತನ್ನ ಸೆಳೆಯುವ ಪಂದ್ಯವಿದು. ಕಳೆದ ಭಾನುವಾರದ ಹೋರಾಟದಲ್ಲಿ ಭಾರತ (India) ಗೆದ್ದು ಬೀಗಿತ್ತು. ಈ ಭಾನುವಾರ ಯಾರಿಗೆ ಗೆಲುವಿನ ಲಕ್ ಇದೆ ಅನ್ನುವುದು ಕುತೂಹಲ ಕೆರಳಿಸಿದೆ. ದುಬೈ (Dubai) ಇಂಟರ್ ನ್ಯಾಷನಲ್ ಮೈದಾನದಲ್ಲಿ ಎರಡು ಕೆರಳಿದ ಸಿಂಹಗಳು ಕಾದಾಟ ನಡೆಸುತ್ತಿರುವುದು ರಣರೋಚಕ ಪಂದ್ಯವಾಗುವುದು ಖಚಿತ.
ಪಾಕ್ (Pak) ವಿರುದ್ಧದ ಪಂದ್ಯ ಗೆದ್ದ ಮೇಲೆ ಟೀಮ್ ಇಂಡಿಯಾ (Ind) ಹಾಂಕಾಂಗ್ ಮೇಲೆ ದೊಡ್ಡ ಗೆಲುವನ್ನು ಸಾಧಿಸಿತ್ತು. ಪಾಕಿಸ್ತಾನವೂ (Pakistan) ಹಾಂಕಾಂಗ್ ತಂಡವನ್ನು ಹೀನಾಯವಾಗಿ ಸೋಲಿಸಿತ್ತು. ಈಗ ಎರಡು ತಂಡಗಳು ಮತ್ತೆ ಮೈ ಕೊಡವಿಕೊಂಡು ಪಂದ್ಯಕ್ಕೆ ಸಜ್ಜಾಗಿರುವುದರಿಂದ ಟೀಮ್ ಕಾಂಬಿನೇಷನ್ ಬಗ್ಗೆ ಕುತೂಹಲ ಹೆಚ್ಚಿದೆ. ಎರಡೂ ತಂಡಗಳು ಬಲಿಷ್ಠ ಆಟಗಾರರನ್ನೇ ಕಣಕ್ಕಿಳಿಸಲಿವೆ. ಟೀಮ್ ಇಂಡಿಯಾಕ್ಕೆ (Team India) ಗಾಯಗೊಂಡಿರುವ ರವೀಂದ್ರ ಜಡೇಜಾ (Ravindra Jadeja) ಸೇವೆ ಲಭ್ಯವಾಗದೇ ಇರುವುದು ಕೊಂಚ ಹಿನ್ನಡೆಯಾಗಿದೆ.
ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಇನ್ನಿಂಗ್ಸ್ ಆರಂಭಿಸುವ ಲೆಕ್ಕಾಚಾರವಿದೆ. ಆದರೆ ಇವರಿಬ್ಬರು ಕಳೆದ ಪಂದ್ಯಗಳ ವೈಫಲ್ಯ ಮರೆತು ಆಡಬೇಕಿದೆ. ಕಿಂಗ್ ಕೊಹ್ಲಿ ಕಂ ಬ್ಯಾಕ್ ಮಾಡಿರುವುದು ಭಾರತಕ್ಕೆ ಬೋನಸ್. ಸೂರ್ಯಕುಮಾರ್ ಯಾದವ್ ಆಟವೇ ಭಾರತಕ್ಕೆ ಪ್ಲಸ್ ಪಾಯಿಂಟ್. ಹಾರ್ದಿಕ್ ಪಾಂಡ್ಯಾ ಮತ್ತು ದಿನೇಶ್ ಕಾರ್ತಿಕ್ ಫಿನಿಷಿಂಗ್ ಟಚ್ ಕೊಡಬಲ್ಲರು. ಜಡೇಜಾ ಸ್ಥಾನ ಅಕ್ಸರ್ ಪಟೇಲ್ ಅಥವಾ ಅಶ್ವಿನ್ ಪಾಲಾಗಬಹುದು. ಭುವನೇಶ್ವರ್ ಕುಮಾರ್, ಅರ್ಶದೀಪ್ ಮತ್ತು ಯಜುವೇಂದ್ರ ಚಹಲ್ ಸ್ಪೆಷಲಿಸ್ಟ್ ಬೌಲರ್‌ಗಳು. ಇವರ ಜೊತೆ ಹಾರ್ದಿಕ್ ಮತ್ತು ಅಶ್ವಿನ್ ಅಥವಾ ಅಕ್ಸರ್ ಕೂಡ ಕೈ ಜೋಡಿಸಬಲ್ಲರು. ಆವೇಶ್ ಖಾನ್ ಜಾಗಕ್ಕೆ ಬೇರೆ ಆಟಗಾರ ಬರುವುದು ಆಲ್‌ಮೋಸ್ಟ್ ಪಕ್ಕಾ.
ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಂ ವೈಫಲ್ಯ ತಲೆನೋವು ತಂದಿದೆ. ಆದರೆ ಮೊಹಮ್ಮದ್ ರಿಜ್ವಾನ್, ಪಖರ್ ಜಮಾನ್ ಫಾರ್ಮ್‌ಗೆ ಮರಳಿರುವುದು ಖುಷಿ ಕೊಟ್ಟಿದೆ. ಕುಶುಲ್ ಶಾ, ಆಸೀಫ್ ಅಲಿ ಮತ್ತು ಇಫ್ತಿಕರ್ ಅಹ್ಮದ್ ಬ್ಯಾಟಿಂಗ್ ಬಲವಿದೆ. ಶದಾಬ್ ಖಾನ್ ಮತ್ತು ಮೊಹಮ್ಮದ್ ನೂಮನ್ ಸ್ಪಿನ್ ಶಕ್ತಿಯಾದರೆ, ಶಹನವಾಜ್ ದಹಾನಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಷಾ ವೇಗದ ಬೌಲಿಂಗ್‌ನ ಅಸ್ತ್ರಗಳು.
ದುಬೈ ಪಿಚ್‌ನಲ್ಲಿ ರನ್‌ಗಳು ಸರಾಗವಾಗಿ ಬರ್ತಿವೆ. ಆದರೆ ಪಿಚ್ ಕೊಂಚ ನಿಧಾನಗತಿಯಿಂದ ಕೂಡಿರುವುದು ಬ್ಯಾಟರ್‌ಗಳಿಗೆ ಸಣ್ಣ ಆತಂಕವನ್ನೂ ಉಂಟು ಮಾಡಿದೆ. ಒಟ್ಟಿನಲ್ಲಿ ಇಂಡೋ-ಪಾಕ್ (Ind VS Pak) ಕದನ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.