ಕಾನ್ಪುರ ಟೆಸ್ಟ್ ಪಂದ್ಯ ಯಾವುದೇ ಟಿ20 ಪಂದ್ಯದ ರೋಚಕತೆಗಿಂತ ಕಡಿಮೆ ಇರಲಿಲ್ಲ. ಪಂದ್ಯದ ಅಂತಿಮ ಎಸೆತದವರೆಗೆ ಟೀಮ್ ಇಂಡಿಯಾ ಗೆಲ್ಲಬಹುದಿತ್ತು. ಆದರೆ ನ್ಯೂಜಿಲೆಂಡ್ ಹೋರಾಟ ಟೀಮ್ ಇಂಡಿಯಾದ ಕೈಯಿಂದ ಟೆಸ್ಟ್ ವಿಜಯವನ್ನು ಕಿತ್ತುಕೊಂಡು ಡ್ರಾಕ್ಕೆ ಸಮಾಧಾನ ಪಡುವ ಹಾಗೆ ಮಾಡಿತು.
ಐದನೇ ದಿನ ಆಟ ಆರಂಭಿಸಿದ್ದ ಟಾಮ್ ಲೇಥಂ ಮತ್ತು ವಿಲಿಯಂ ಸೊಮರ್ವಿಲ್ಲೆ ಟೀಮ್ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡಿದರು. ನೈಟ್ವಾಚ್ಮನ್ ಆಗಿದ್ದ ವಿಲಿಯಂ ಸೊಮರ್ವಿಲ್ಲೆ ಭಾರತೀಯ ದಾಳಿಯನ್ನು ಹಿಮ್ಮೆಟ್ಟಿದರು. ಕಿವೀಸ್ ಗೆಲುವಿನ ಆಸೆ ಮೊದಲ ಸೆಷನ್ನಲ್ಲೇ ದೂರವಾಗಿತ್ತು. ಆದರೆ ಪಂದ್ಯವನ್ನು ಡ್ರಾ ಮಾಡುವ ಕನಸು ಚಿಗುರಿತ್ತು. ಮೊದಲ ಅವಧಿಯಲ್ಲಿ ಟೀಮ್ ಇಂಡಿಯಾಕ್ಕೆ ಒಂದೇ ಒಂದು ವಿಕೆಟ್ ಸಿಗಲಿಲ್ಲ.
2ನೇ ಅವಧಿಯ ಆರಂಭದಲ್ಲೇ 36 ರನ್ಗಳಿಸಿದ್ದ ಸೊಮರ್ವಿಲ್ಲೆ ಉಮೇಶ್ ಯಾದವ್ ಎಸೆತದಲ್ಲಿ ಗಿಲ್ಗೆ ಕ್ಯಾಚಿತ್ತು ಔಟಾದರು. ಲೇಥಂ ರಕ್ಷಣಾತ್ಮಕ ಆಟಕ್ಕೆ ಕೇನ್ ವಿಲಿಯಮ್ಸನ್ ಸಾಥ್ ನೀಡಿದರು. ಅಷ್ಟೇ ಅಲ್ಲ ಲೇಥಂ ಅರ್ಧಶತಕದ ಗಡಿ ಕೂಡ ದಾಟಿದರು,.ಲೇಥಂ 52 ರನ್ಗಳಿಸಿದ್ದಾಗ ಅಶ್ವಿನ್ ಎಸೆತದಲ್ಲಿ ಬೌಲ್ಡ್ ಆದರು. ಈ ಮೂಲಕ ಅಶ್ವಿನ್ ಹರ್ಭಜನ್ ಸಿಂಗ್ ಹೆಸರಿನಲ್ಲಿದ್ದ 417 ವಿಕೆಟ್ಗಳ ದಾಖಲೆಯನ್ನು ಮುರಿದು ಮುಂದಕ್ಕೆ ಹೋದರು. ಟೀ ವಿರಾಮಕ್ಕೂ ಮುನ್ನ ರಾಸ್ ಟೇಲರ್ ಜಡೇಜಾ ಎಸೆತದಲ್ಲಿ ಔಟಾಗಿದ್ದು ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿತು.
ಟೀ ಬಳಿಕ ಟೀಮ್ ಇಂಡಿಯಾಕ್ಕೆ ಮೇಲಿಂದ ಮೇಲೆ ಸಕ್ಸಸ್ ಸಿಕ್ಕಿತ್ತು. ಹೆನ್ರಿ ನಿಕೊಲಸ್ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು. ನೆಲಕಚ್ಷಿ ಆಡುತ್ತಿದ್ದ ಕೇನ್ ವಿಲಿಯಮ್ಸನ್ ಕೂಡ 24 ರನ್ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಟಾಮ್ ಬ್ಲಂಡಲ್ ಅಶ್ವಿನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು. ಕೈಲ್ ಜೇಮಿಸನ್ ಮತ್ತು ಟಿಮ್ ಸೌಥಿ ಕೂಡ ಜಡೇಜಾ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದಾಗ ಟೀಮ್ ಇಂಡಿಯಾದ ಗೆಲುವು ಬಹುತೇಕ ಖಚಿತವಾಗಿತ್ತು.
ಮೊದಲ ಟೆಸ್ಟ್ ಆಡುತ್ತಿದ್ದ ರಚಿನ್ ರವೀಂದ್ರ ಮತ್ತು ಕೊನೆಯ ಬ್ಯಾಟ್ಸ್ಮನ್ ಅಜಝ್ ಪಟೇಲ್ ಸುಮಾರು 10 ಓವರುಗಳ ಕಾಲ ಟೀಮ್ ಇಂಡಿಯಾವನ್ನು ರಕ್ಷಣಾತ್ಮಕ ಆಟದಿಂದ ಕಾಡಿದರು. ಅಶ್ವಿನ್, ಜಡೇಜಾ ಮತ್ತು ಅಕ್ಸರ್ ಏನೇ ಪ್ರಯೋಗ ಮಾಡಿದರೂ ಇಬ್ಬರೂ ಔಟಾಗಲಿಲ್ಲ. ಕೊನೆಯಲ್ಲಿ ಮಂದ ಬೆಳಕಿನಿಂದಾಗಿ ಪಂದ್ಯ ನಿಂತಿತ್ತು. ನ್ಯೂಜಿಲೆಂಡ್ 9 ವಿಕೆಟ್ ಕಳೆದುಕೊಂಡು 165 ರನ್ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ರಚಿನ್ ಮತ್ತು ಪಟೇಲ್ ಹೋರಾಟ ನ್ಯೂಜಿಲೆಂಡ್ಗೆ ಸೋಲಿನ ಅವಮಾನ ತಪ್ಪಿಸಿದರೆ, ಭಾರತದ ಕೈಯಿಂದ ಗೆಲುವನ್ನು ಕಿತ್ತುಕೊಂಡಿತ್ತು.