ಏಷ್ಯಾಕಪ್ನಲ್ಲಿ (Asia Cup) ಟೀಮ್ ಇಂಡಿಯಾದ (Team India) ಆಟಕ್ಕೆ ಸವಾಲು ಹಾಕುವುದು ಬಲಿಷ್ಠ ತಂಡಕ್ಕೆ ಕೂಡ ಕಷ್ಟ ಮಾತು. ಪಾಕಿಸ್ತಾನ ತಂಡವೇ ಟೀಮ್ ಇಂಡಿಯಾದ ಆಟದ ಮುಂದೆ ಮುಂಡಿಯೂರಿತ್ತು. ಈಗ ಎ ಬಣದ ಅಂತಿಮ ಪಂದ್ಯದಲ್ಲಿ ಭಾರತಕ್ಕೆ (India) ಹಾಂಕಾಂಗ್ (Hongkong) ಸವಾಲು ಹಾಕಿದೆ. ಹಾಂಕಾಂಗ್ ಶಕ್ತಿ ಭಾರತದ ಮುಂದೆ ಕಡಿಮೆ ಎಂದೆನಿಸುತ್ತದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಸಾಟಿಯಲ್ಲ ಅನ್ನುವ ಲೆಕ್ಕಾಚಾರವಿದೆ. ಆದರೆ ಕ್ರಿಕೆಟ್ ಶಿಶುಗಳು ಕೂಡ ಕೆಲವೊಮ್ಮೆ ಬಲಿಷ್ಠ ತಂಡಗಳಿಗೆ ಸವಾಲಾಗಿರುವ ಉದಾಹರಣೆಗಳಿವೆ.
ಹಿಂದೆ ಏನಾಗಿತ್ತು?
ಭಾರತ ಮತ್ತು ಹಾಂಕಾಂಗ್ (Ind VS Hkg) ನಡುವೆ ಈ ಹಿಂದೆ 2 ಬಾರಿ ಮ್ಯಾಚ್ ನಡೆದಿದೆ. ಎರಡೂ ಬಾರಿಯೂ ಏಕದಿನ ಫಾರ್ಮೆಟ್ನಲ್ಲಿ ಮುಖಾಮುಖಿಯಾಗಿದ್ದವು. ಏಷ್ಯಾಕಪ್ನಲ್ಲೇ ಈ ತಂಡಗಳು ಮುಖಾಮುಖಿಯಾಗಿದ್ದವು. ಭಾರತ ಒಮ್ಮೆ ಭರ್ಜರಿ ದಿಗ್ವಿಜಯ ಸಾಧಿಸಿದ್ದರೆ, ಮತ್ತೊಮ್ಮೆ ಗೆಲುವಿಗಾಗಿ ಹರಸಾಹಸ ಪಟ್ಟಿತ್ತು. ಈ ಬಾರಿ ಟಿ20 ಮಾದರಿಯಲ್ಲಿ ಫೈಟ್ ನಡೆಯುತ್ತಿರುವುದರಿಂದ ಕೊಂಚ ಇಂಟರೆಸ್ಟ್ ಹೆಚ್ಚಿದೆ.
ಅಚ್ಚರಿ ಅಂದರೆ ಹಾಂಕಾಂಗ್ ತಂಡದಲ್ಲೇ ಹಾಂಕಾಂಗ್ ಮೂಲದವರಿಲ್ಲ. ಎಲ್ಲರೂ ಭಾರತ, ಪಾಕಿಸ್ತಾನ ಮತ್ತು ಬ್ರಿಟಿಷ್ ಮೂಲದವರೇ. ಹೀಗಾಗಿ ಇವರಿಗೆ ಸ್ಥಳೀಯ ಕ್ರಿಕೆಟ್ನ ಅನುಭವ ಇದೆ. ಇದರ ಬಗ್ಗೆ ಭಾರತ ಕೂಡ ತಿಳಿದುಕೊಂಡಿದೆ. ಯಾವುದೇ ಕಾರಣಕ್ಕೂ ಎಚ್ಚರ ತಪ್ಪುವ ಹಾಗಿಲ್ಲ ಎಂದು ಪ್ಲಾನ್ ಮಾಡಿದೆ.
2008ರಲ್ಲಿ ಮೊದಲ ಬಾರಿಗೆ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಅಂದು ಭಾರತ 50 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 374 ರನ್ ಬಾರಿಸಿತ್ತು. ಧೋನಿ ಮತ್ತು ರೈನಾ ಅಜೇಯ ಶತಕ ಸಿಡಿಸಿದ್ದರು. ಚೇಸಿಂಗ್ ಮಾಡಿದ್ದ ಹಾಂಕಾಂಗ್ ಕೇವಲ 118 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಅನುಭವಿಸಿತ್ತು.
2018ರಲ್ಲಿ ಮತ್ತೊಮ್ಮೆ ಈ ತಂಡಗಳು ಮುಖಾಮುಖಿಯಾಗಿದ್ದವು. ಅಂದು ಭಾರತ ಜಸ್ಟ್ ಬಚಾವ್ ಆಗಿತ್ತು. ಭಾರತ 50 ಓವರುಗಳಲ್ಲಿ 285 ರನ್ಗಳಿಸಿತ್ತು. ಇದನ್ನು ಚೇಸ್ ಮಾಡಲು ಹೊರಟಿದ್ದ ಹಾಂಕಾಂಗ್ 8 ವಿಕೆಟ್ ಕಳೆದುಕೊಂಡು 259 ರನ್ಗಳಿಸಿತ್ತು.
ಆದರೆ ಈಗ ಟೀಮ್ ಇಂಡಿಯಾ ಬದಲಾಗಿದೆ. ಫಾರ್ಮೆಟ್ ಬದಲಾಗಿದೆ. ಆಟಗಾರರು ಕೂಡ ಹೊಸಬರಿದ್ದಾರೆ. ಹೀಗಾಗಿ ಹಾಂಕಾಂಗ್ ಆಟವನ್ನು ಬೇಗನೆ ಕಟ್ಟಿಹಾಕಬಹುದು ಅನ್ನುವ ನಿರೀಕ್ಷೆ ಇದೆ.