Ind Vs Eng test match – ಹೆಡ್ ಕೋಚ್ ರಾಹುಲ್ ದ್ರಾವಿಡ್ ಸಂಭ್ರಮಿಸುವಂತೆ ಮಾಡಿದ್ದ ರಿಷಬ್ ಪಂತ್ ಬ್ಯಾಟಿಂಗ್ ವೈಖರಿ..!
ರಾಹುಲ್ ದ್ರಾವಿಡ್ ಕ್ರಿಕೆಟ್ ಜಗತ್ತಿನ ಬುದ್ಧ… ಕ್ಲಾಸ್.. ಕನ್ಸಿಸ್ಟೇನ್ಸಿ.. ಕಮಿಟ್ ಮೆಂಟ್ ಗೆ ಮತ್ತೊಂದು ಹೆಸರೇ ರಾಹುಲ್ ದ್ರಾವಿಡ್.
ಹೌದು, ಟೀಮ್ ಇಂಡಿಯಾದ ದಿ ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ತನ್ನ ಬದುಕನ್ನು ಪೂರ್ತಿಯಾಗಿ ಕ್ರಿಕೆಟ್ ಆಟಕ್ಕಾಗಿಯೇ ಸಮರ್ಪಿಸಿಕೊಂಡಿದ್ದಾರೆ. ಸುಮಾರು 15 ವರ್ಷಗಳ ಕಾಲ ಟೀಮ್ ಇಂಡಿಯಾ ಪರ ಆಡಿದ್ದ ರಾಹುಲ್ ದ್ರಾವಿಡ್ ವಿಶ್ವ ಕ್ರಿಕೆಟ್ ನ ಅಪ್ರತಿಮ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ.
ವೃತ್ತಿ ಪರ ಕ್ರಿಕೆಟ್ ಗೆ ವಿದಾಯ ಹೇಳಿದ ನಂತರ ರಾಹುಲ್ ದ್ರಾವಿಡ್ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ಹಾಗೇ ಕ್ರಿಕೆಟ್ ವಿಶ್ಲೇಷಣೆ ಕೂಡ ಮಾಡಲಿಲ್ಲ. ವಿದಾಯದ ನಂತರ ತನ್ನ ಕುಟುಂಬದ ಜೊತೆ ನೆಮ್ಮದಿಯಾಗಿ ಕಾಲ ಕಳೆಯಬಹುದಿತ್ತು. ಆದ್ರೆ ದ್ರಾವಿಡ್ ದೂರದೃಷ್ಟಿಯೇ ಬೇರೆನೇ ಇತ್ತು. ತನ್ನ ಬದುಕನ್ನು ರೂಪಿಸಿದ್ದ ಕ್ರಿಕೆಟ್ ಆಟಕ್ಕೆ ಇನ್ನಷ್ಟು ಕೊಡುಗೆಯನ್ನು ನೀಡಬೇಕು ಎಂಬ ಉದ್ದೇಶವನ್ನು ಹೊಂದಿದ್ದರು. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ತರಬೇತುದಾರನ ಹುದ್ದೆಯನ್ನು.
ಮೊದಲು ಭಾರತ 19 ವಯೋಮಿತಿ, ಆನಂತರ ಭಾರತ ಎ ತಂಡ. ಬಳಿಕ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಸಾರಥ್ಯ. ಇಲ್ಲಿ ಯುವ ಕ್ರಿಕೆಟ್ ಆಟಗಾರರನ್ನು ಹುಡುಕಿ ಅವರ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಗುರುತಿಸಿದ್ರು. ನೋಡ ನೋಡುತ್ತಲೇ ಟೀಮ್ ಇಂಡಿಯಾದ ಬೆಂಚ್ ಸ್ಟ್ರೆಂತ್ ಕೂಡ ಹೆಚ್ಚಾಗಿತ್ತು. 11ರ ಬಳಗದಿಂದ ಹಿಡಿದು ಟೀಮ್ ಇಂಡಿಯಾಗೆ ಅಯ್ಕೆಯಾಗಲು ಸರದಿ ಸಾಲಿನಲ್ಲಿ ಆಟಗಾರರನ್ನು ನಿಲ್ಲುವಂತೆ ಮಾಡಿದ್ದು ನಮ್ಮ ಪ್ರೀತಿಯ ರಾಹುಲ್ ದ್ರಾವಿಡ್.
ಹೌದು, ಇದೀಗ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾವನ್ನು ವಿಶ್ವದ ಬಲಿಷ್ಠ ತಂಡವಾಗಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಒಂದಂತೂ ನಿಜ, ಆಟದಲ್ಲಿ ಸೋಲು ಗೆಲುವು, ಏರಿಳಿತಗಳು ಇರೋದು ಸಹಜ. ಅದನ್ನು ಸಮಾನ ರೀತಿಯಲ್ಲಿಟ್ಟುಕೊಂಡು ಮುಂದುವರಿಯಬೇಕು ಎಂಬುದು ರಾಹುಲ್ ಗೆ ಯಾರು ಕೂಡ ಹೇಳಿಕೊಡಬೇಕಾಗಿಲ್ಲ.
ಈಗಾಗಲೇ ಟೀಮ್ ಇಂಡಿಯಾದ ಆಟಗಾರರಿಗೆ ಸೂಕ್ತ ಸಲಹೆಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ರಿಷಬ್ ಪಂತ್ ಮೇಲೆ ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿರುವ ದ್ರಾವಿಡ್ ಇಂಗ್ಲೆಂಡ್ ಟೆಸ್ಟ್ ಪಂದ್ಯಕ್ಕೆ ಮುನ್ನ ಸಾಕಷ್ಟು ರೀತಿಯ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಿದ್ದರು. ಗುರುವಿನ ಸಲಹೆಗಳನ್ನು ರಿಷಬ್ ಪಂತ್ ಪರಿಪಾಲಿಸಿಕೊಂಡಿದ್ದಾರೆ. ಹೀಗಾಗಿಯೇ ರಿಷಬ್ ಪಂತ್ ಶತಕ ದಾಖಲಿಸುತ್ತಿದ್ದಂತೆ ಪೆವಿಲಿಯನ್ ನಲ್ಲಿದ್ದ ರಾಹುಲ್ ದ್ರಾವಿಡ್ ಅವರ ಖುಷಿಗೆ ಪಾರವೇ ಇರಲಿಲ್ಲ. Ind Vs Eng test match – Dravid’s never-before-seen reaction to Pant’s century
https://twitter.com/i/status/1542911849615613952
ಇದೀಗ ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಯಾಕಂದ್ರೆ ಸಾಮಾನ್ಯವಾಗಿ ರಾಹುಲ್ ದ್ರಾವಿಡ್ ಸಂತಸ, ಸಂಭ್ರಮವನ್ನು ತೋರಿಸಿಕೊಳ್ಳುವುದಿಲ್ಲ. ಶಿಸ್ತುಬದ್ಧವಾಗಿರುವ ರಾಹುಲ್ ದ್ರಾವಿಡ್ ಅವರು ಪಂತ್ ಶತಕವನ್ನು ಸಂಭ್ರಮಿಸುವುದಕ್ಕೆ ಕಾರಣವೂ ಇದೆ.
98ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿದ್ದು ಪಂತ್ ಮತ್ತು ಜಡೇಜಾ. ರಿಷಬ್ ಪಂತ್ ಇಂಗ್ಲೀಷ್ ಬೌಲರ್ ಗಳನ್ನು ದಂಡಿಸಿದ್ದ ರೀತಿಗೆ ಕ್ರಿಕೆಟ್ ಜಗತ್ತು ಕೂಡ ಕೊಂಡಾಡುತ್ತಿದೆ.
ಇನ್ನು ದ್ರಾವಿಡ್ ಸಂಭ್ರಮಿಸಿದ್ದ ವಿಡಿಯೋ ವೈರಲ್ ಆಗಿರುವುದಕ್ಕೆ ನಾನಾ ಕಾರಣಗಳಿರಬಹುದು. ಯಾಕಂದ್ರೆ ಸ್ವತಃ ಆಟಗಾರನಾಗಿದ್ದಾಗ ರಾಹುಲ್ ದ್ರಾವಿಡ್ ಶತಕವನ್ನೇ ದಾಖಲಿಸಲಿ, ಅಥವಾ ತಂಡ ಗೆದ್ದಾಗ ಕೂಡ ಈ ಮಟ್ಟದಲ್ಲಿ ಸಂಭ್ರಮಪಟ್ಟಿರುವುದು ತುಂಬಾ ವಿರಳ.
ಒಟ್ಟಿನಲ್ಲಿ ರಿಷಬ್ ಪಂತ್ ತನ್ನ ಅದ್ಭುತ ಆಟದಿಂದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಮನ ಗೆಲ್ಲಲು ಯಶಸ್ವಿಯಾಗಿದ್ದಾರೆ. ಅಲ್ಲದೆ ದ್ರಾವಿಡ್ ಯುವ ಆಟಗಾರರನ್ನು ಯಾವ ರೀತಿ ಪ್ರೋತ್ಸಾಯಿಸುತ್ತಾರೆ ಎಂಬುದಕ್ಕೆ ಇದೊಂದು ಸಣ್ಣ ನಿದರ್ಶನ ಅಷ್ಟೇ..!