Ind Vs Eng Test Match – ಹ್ಯಾಟ್ಸ್ ಆಫ್ ಪಂತ್.. ಬಟ್ ನಾವು ಹೆದರಲ್ಲ -ಪಾಲ್ ಕಾಲಿಂಗ್ ವುಡ್
ಐದನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಬ್ಯಾಟಿಂಗ್ ಅಬ್ಬರಕ್ಕೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ, ಇಂಗ್ಲೆಂಡ್ ಸಹಾಯಕ ಕೋಚ್ ಪಾಲ್ ಕಾಲಿಂಗ್ ವುಡ್ ಕೂಡ ರಿಷಬ್ ಪಂತ್ ಆಟಕ್ಕೆ ಮನ ಸೋತಿದ್ದಾರೆ.
ಸಾಮಾನ್ಯವಾಗಿ ಆಟಗಾರರನ್ನು ಎದುರಾಳಿ ತಂಡದ ಸಹಾಯಕ ಸಿಬ್ಬಂದಿಗಳು ಕೊಂಡಾಡುವುದು ತೀರಾ ವಿರಳ. ಅಂತಹುದ್ದರಲ್ಲಿ ಇಂಗ್ಲೆಂಡ್ ನ ಮಾಜಿ ನಾಯಕ ಹಾಗೂ ಹಾಲಿ ಸಹಾಯಕ ಕೋಚ್ ಪಾಲ್ ಕಾಲಿಂಗ್ ವುಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಂದಾಗ ತುಸು ಅಚ್ಚರಿಯೂ ಆಗುತ್ತದೆ. ಆದ್ರೆ ಒಬ್ಬ ಆಟಗಾರನಾಗಿ, ಸಹಾಯಕ ಕೋಚ್ ಆಗಿ ಪಾಲ್ ಕಾಲಿಂಗ್ ವುಡ್ ಎದುರಾಳಿ ಆಟಗಾರರನ್ನು ಕೊಂಡಾಡಿರುವುದು ಅವರ ಕ್ರೀಡಾ ಸ್ಪೂರ್ತಿಯನ್ನು ತೋರಿಸುತ್ತದೆ.
ಹ್ಯಾಟ್ಸ್ ಆಫ್ ರಿಷಬ್ ಪಂತ್. ವಿಶ್ವ ದರ್ಜೆಯ ಆಟಗಾರರ ವಿರುದ್ಧ ಆಡುವಾಗ ವಿಶ್ವ ದರ್ಜೆಯ ಆಟವನ್ನೇ ನೋಡಬಹುದು ಎಂದು ಪಾಲ್ ಕಾಲಿಂಗ್ ವುಡ್ ಹೇಳಿದ್ದಾರೆ.
ಟೀಮ್ ಇಂಡಿಯಾ ಐದನೇ ಟೆಸ್ಟ್ ಪಂದ್ಯದಲ್ಲಿ 98ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಆರನೇ ವಿಕೆಟ್ ಗೆ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ 222 ರನ್ ಗಳ ಜೊತೆಯಾಟವನ್ನಾಡಿದ್ರು. ಹೀಗಾಗಿ ಟೀಮ್ ಇಂಡಿಯಾ ಚೇತರಿಕೆ ಪಡೆದುಕೊಂಡು ಇಂಗ್ಲೆಂಡ್ ಗೆ ಸವಾಲು ಒಡ್ಡುವಂತಹ ರನ್ ಗಳನ್ನು ಕಲೆ ಹಾಕಿದೆ.
ಹಾಗಂತ ಇಂಗ್ಲೆಂಡ್ ತಂಡ ಹೆದರಿಕೊಂಡಿಲ್ಲ. ಇಂಗ್ಲೆಂಡ್ ತಂಡ ತಿರುಗೇಟು ನೀಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಾಲ್ಕನೇ ಇನಿಂಗ್ಸ್ ನಲ್ಲಿ ಇತ್ತೀಚಿನ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲೂ ಇಂಗ್ಲೆಂಡ್ ತಂಡ ಉತ್ತಮ ಪ್ರದರ್ಶನ ನೀಡಿದೆ. ಅಲ್ಲದೆ ತಂಡ ಗೆಲುವನ್ನು ಕೂಡ ದಾಖಲಿಸಿದೆ. ಇಂಗ್ಲೆಂಡ್ ತಂಡಕ್ಕೆ ಸವಾಲುಗಳನ್ನು ಮೆಟ್ಟಿ ನಿಲ್ಲುವಂತಹ ಸಾಮಥ್ರ್ಯ ಇದೆ ಎಂದು ಪಾಲ್ ಕಾಲಿಂಗ್ ವುಡ್ ಹೇಳಿದ್ದಾರೆ.
ನಾಯಕ ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ ಆಕ್ರಮಣಕಾರಿ ಆಟವನ್ನು ಆಡುತ್ತಿದೆ. ಅಲ್ಲದೆ ಇಂಗ್ಲೆಂಡ್ ತಂಡದ ಹೆಡ್ ಕೋಚ್ ಬ್ರೆಂಡನ್ ಮೆಕಲಮ್ ಕೂಡ ಆಕ್ರಮಣಕಾರಿ ಪ್ರವೃತ್ತಿಯ ಕೋಚ್. ಹೀಗಾಗಿಯೇ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 3-0 ಯಿಂದ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಸಾಧ್ಯವಾಯ್ತು. ಮೂರು ಪಂದ್ಯಗಳಲ್ಲೂ ನಾಲ್ಕನೇ ಇನಿಂಗ್ಸ್ ನಲ್ಲಿ ಸವಾಲುಗಳನ್ನು ಮೆಟ್ಟಿ ನಿಂತು ಗೆಲ್ಲಲು ಸಾಧ್ಯವಾಯ್ತು. ಹೀಗಾಗಿಯೇ ಬೆನ್ ಸ್ಟೋಕ್ಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿರುವುದು ಎಂದು ಪಾಲ್ ಕಾಲಿಂಗ್ ವುಡ್ ಇಂಗ್ಲೆಂಡ್ ತಂಡದ ಶಕ್ತಿಯ ಬಗ್ಗೆ ಹೇಳಿಕೊಂಡಿದ್ದಾರೆ.