Ind VS Eng: ಇಂಗ್ಲೆಂಡ್ ನೆಲದಲ್ಲಿ ಇಂಡಿಯನ್ ವೇಗಿಗಳ ಕಾರುಬಾರು, ಸ್ವಿಂಗ್, ಪೇಸ್ ಎರಡರಲ್ಲೂ ದರ್ಬಾರ್

ಟೀಮ್ ಇಂಡಿಯಾದ ಬೌಲರ್‌ಗಳು ತವರಿನಲ್ಲಿ ಮಾತ್ರ ಹುಲಿಗಳು ಅನ್ನುವ ಮಾತಿತ್ತು. ಆದರೆ ಕೆಲ ವರ್ಷಗಳ ಹಿಂದಿನ ಮಾತಿಗೆ ಈಗ ಕವಡೆ ಕಾಸಿನ ಕಿಮತ್ತಿಲ್ಲ. ವೇಗದ ಬೌಲರ್‌ಗಳು ಎಲ್ಲಿ ಬೇಕಾದರೂ, ಯಾವ ಮೈದಾನದಲ್ಲಿ ಬೇಕಾದರೂ ಮಿಂಚಬಹುದು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬೌಲಿಂಗ್‌ನಲ್ಲಿ ಚಾಕಚಕ್ಯತೆ ಇದ್ದರೆ ಎಲ್ಲವೂ ಸಾಧ್ಯ ಅನ್ನುವುದನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ೨೦ ಸರಣಿಯಲ್ಲಿ ತೋರಿಸಿಕೊಂಡಿದ್ದಾರೆ.
3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಯಲ್ಲಿ ಒಟ್ಟು 5 ಬಾರಿ ಆತಿಥೇಯರು ಆಲೌಟ್ ಆಗಿದ್ದಾರೆ. ಇದೇ ವೇಳೆ, ಪ್ರವಾಸಿ ಭಾರತೀಯರು 6 ಪಂದ್ಯಗಳಲ್ಲಿ ಆಲೌಟ್ ಆಗಿದ್ದು ಒಂದೇ ಬಾರಿ! ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಶಮಿ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಪ್ರಸಿಧ್ ಕೃಷ್ಣ, ಮೊಹಮದ್ ಸಿರಾಜ್ ಅವರನ್ನು ಒಳಗೊಂಡ ವೇಗಿಗಳ ಪಡೆ ಸದ್ಯಕ್ಕೆ ವಿಶ್ವದಲ್ಲೇ ಶ್ರೇಷ್ಠ ಎನ್ನಲಡ್ಡಿಯಿಲ್ಲ.

Sports Karnataka
ಈ ವೇಗಿಗಳು ಈ ಬಾರಿ ಇಂಗ್ಲೆಂಡ್ ತಂಡವನ್ನು ಸಿಂಹಸ್ವಪ್ನವಾಗಿ ಕಾಡಿದರು. ಸ್ವಿಂಗ್, ಪೇಸ್ ಮತ್ತು ಬೌನ್ಸ್ ತಜ್ಞರನ್ನು ಒಳಗೊಂಡಿರುತ್ತಿದ್ದ ಇಂಗ್ಲೆಂಡ್ ಪಾಳಯಕ್ಕೆ, ಅದೇ ಅಸ್ತ್ರದಿಂದ ತಿರುಗೇಟು ನೀಡಿದರು. ಎಷ್ಟರ ಮಟ್ಟಿಗೆ ಎಂದರೆ, 6 ಪಂದ್ಯಗಳಲ್ಲಿ ಭಾರತೀಯ ವೇಗಿಗಳು ಇಂಗ್ಲೆಂಡ್‌ನ ಮುಕ್ಕಾಲು ವಿಕೆಟ್ ಕಬಳಿಸಿದರು. ಹಾರ್ದಿಕ್ 11, ಬೂಮ್ರಾ 10, ಶಮಿ, ಹರ್ಷಲ್ ಪಟೇಲ್ ಹಾಗೂ ಭುವನೇಶ್ವರ್ ಕುಮಾರ್ ತಲಾ 4 ವಿಕೆಟ್ ಪಡೆದರು. ಅದರಲ್ಲೂ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಎಲ್ಲಾ 10 ವಿಕೆಟ್‌ಗಳು ವೇಗಿಗಳ ಪಾಲಾಗಿತ್ತು. ಆ ಪಂದ್ಯದಲ್ಲಿ ಬೂಮ್ರಾ ಕೇವಲ 19 ರನ್‌ಗೆ 6 ವಿಕೆಟ್ ಕಬಳಿಸಿದ್ದರು. ಶಮಿ ಹಾಗೂ ಹಾರ್ದಿಕ್ ಎದುರಾಳಿಗಳನ್ನು ಬೌನ್ಸರುಗಳಿಂದಲೇ ಕಾಡಿದರು.
ಟಿ20 ಮತ್ತು ಏಕದಿನ ಸರಣಿಯ ಒಟ್ಟು 6 ಪಂದ್ಯಗಳಲ್ಲಿ ಮೂರು ಬಾರಿ ಭಾರತದ ವೇಗಿಗಳು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಟಿ20 ಸರಣಿಯಲ್ಲಿ ಭುವನೇಶ್ವರ್ ಕುಮಾರ್, ಏಕದಿನಲ್ಲಿ ಹಾರ್ದಿಕ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು, ಭಾರತೀಯ ವೇಗಿಗಳ ಸಾಧನೆಗೆ ಹಿಡಿದ ಕನ್ನಡಿ.