ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕನಾಗಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮ ಸಾಕಷ್ಟು ಆತ್ಮವಿಶ್ವಾಸದಿಂದ ಇದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಹೇಳಿದ್ದಾರೆ.
ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ರೋಹಿತ್ ಶರ್ಮ ಉತ್ತಮ ಪ್ರದರ್ಶನ ನೀಡಿದ್ದು, ಅವರು ತೋರಿದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಅವರಲ್ಲಿನ ನಂಬಿಕೆಯನ್ನು ಹೆಚ್ಚಿಸಿದೆ. ನೀವು ತಂಡದಲ್ಲಿ ಉತ್ತಮ ಆಟಗಾರನಾಗಿದ್ದಾಗ ಮಾತ್ರ ಇತರೆ ಆಟಗಾರರಿಂದಲೂ ಹೆಚ್ಚಿನ ನಿರೀಕ್ಷೆ ಹೊಂದಬಹುದು. ಅಲ್ಲದೇ ನಾಯಕತ್ವದಲ್ಲೂ ರೋಹಿತ್ ಶರ್ಮ ಅಗತ್ಯ ಅನುಭವ ಹೊಂದಿದ್ದಾರೆ.
ಟೀಂ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಎನಿಸಿದ್ದ ವಿರಾಟ್ ಕೊಹ್ಲಿ ಸ್ಥಾನವನ್ನು ತುಂಬುವ ಸಾಮರ್ಥ್ಯ ರೋಹಿತ್ ಶರ್ಮ ಅವರಿಗಿದೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ತವರಿನಲ್ಲಿ ಹಾಗೂ ವಿದೇಶಿ ನೆಲದಲ್ಲಿ ಬಲಿಷ್ಠ ತಂಡ ಎನಿಸಿದೆ. ತವರಿನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ನೂತನ ಕ್ಯಾಪ್ಟನ್ ರೋಹಿತ್ ಶರ್ಮಗೆ, ಅವರ ಪಾತ್ರ ಏನೆಂಬುದನ್ನು ಅರಿತುಕೊಳ್ಳಲು ನೆರವಾಗಲಿದೆ ಎಂದು ಅಜಿತ್ ಅಗರ್ಕರ್ ಸ್ಟಾರ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ವೈಟ್ ಬಾಲ್ ಕ್ರಿಕೆಟ್ನಲ್ಲಿ ಉತ್ತಮ ಕ್ಯಾಪ್ಟನ್ ಎನಿಸಿರುವ ರೋಹಿತ್ ಶರ್ಮ, ಟೆಸ್ಟ್ನಲ್ಲಿ ಯಾವ ರೀತಿ ತಂಡವನ್ನು ಮುನ್ನಡೆಸುತ್ತಾರೆ ಎಂಬ ನಿರೀಕ್ಷೆ ಹೆಚ್ಚಿದೆ. 2019ರಿಂದ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಂಡಿರುವ ರೋಹಿತ್ ಶರ್ಮ, ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ನಾಲ್ಕು ಟೆಸ್ಟ್ ಪಂದ್ಯಗಳಿಂದ ಒಂದು ಶತಕ ಮತ್ತು ಎರಡು ಅರ್ಧಶತಕದ ನೆರವಿನಿಂದ 368 ರನ್ಗಳಿಸಿದ್ದರು.