ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಗೆ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಈಗಾಗಲೇ ಟಿ20 ಸರಣಿ ಗೆದ್ದಿರುವ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿ ಮುಡಿಗೇರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಆದರೆ ತವರಿನಲ್ಲಿ ನಡೆಯುತ್ತಿರುವ ಲಂಕಾ ವಿರುದ್ಧದ ಸರಣಿಯಲ್ಲಿ ಗೆಲ್ಲಲು ಭಾರತ ಕಠಿಣ ಸವಾಲೊಂದನ್ನು ಮೆಟ್ಟಿನಿಲ್ಲಬೇಕಿದೆ.
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಸಜ್ಜಾಗಿರುವ ಭಾರತ ಗೆಲುವಿನ ಫೇವರೆಟ್ ಎನಿಸಿದ್ದರೂ, ತಂಡದ ಬ್ಯಾಟಿಂಗ್ ಕ್ರಮಾಂಕದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಟೀಂ ಇಂಡಿಯಾ ಕಳೆದ 10 ವರ್ಷಗಳಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಎನಿಸಿರುವ ಚೇತೇಶ್ವರ್ ಪುಜಾರ ಹಾಗೂ ಅಂಜಿಕ್ಯಾ ರಹಾನೆ ಅವರುಗಳ ಹೊರತಾಗಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡುತ್ತಿದೆ. ಹೀಗಾಗಿ ಈ ಇಬ್ಬರು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ.
ಕಳೆದ ಹಲವು ವರ್ಷದಿಂದ ಟೀಂ ಇಂಡಿಯಾದ ಟೆಸ್ಟ್ ತಂಡದ ಕಾಯಂ ಸದಸ್ಯರಾಗಿದ್ದ ಚೇತೇಶ್ವರ್ ಪುಜಾರ ಹಾಗೂ ಅಜಿಂಕ್ಯಾ ರಹಾನೆ, ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದರು. ಆದರೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಈ ಇಬ್ಬರು ಆಟಗಾರರನ್ನು ಕೈಬಿಡಲಾಗಿದೆ. ಹೀಗಾಗಿ 3 ಮತ್ತು 5ನೇ ಕ್ರಮಾಂಕಕ್ಕೆ ಆಟಗಾರರ ನಡುವೆ ಪೈಪೋಟಿ ಶುರುವಾಗಿದ್ದು, ಹನುಮ ವಿಹಾರಿ, ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಇವರಲ್ಲಿ ಯಾರು ಈ ಕ್ರಮಾಂಕವನ್ನು ತುಂಬಲಿದ್ದಾರೆ ಎಂಬ ಕುತೂಹಲ ಮೂಡಿದೆ.
ನಾಯಕ ರೋಹಿತ್ ಶರ್ಮ ಹಾಗೂ ಮಯಾಂಕ್ ಅಗರ್ವಾಲ್ ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಇನ್ನೂ ರಿಷಬ್ ಪಂತ್, ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಅವರುಗಳು 6, 7 ಮತ್ತು 8ನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ. ಹೀಗಾಗಿ 3 ಮತ್ತು 5ನೇ ಕ್ರಮಾಂಕದಲ್ಲಿ ಯಾರನ್ನ ಕಣಕ್ಕಿಳಿಸಬೇಕೆಂಬುದು ಇದೀಗ ಕಠಿಣ ಆಯ್ಕೆಯಾಗಿದೆ.