ಭಾರತದ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮೊದಲೇ ಗಾಯದ ಸಮಸ್ಯೆ ಎದುರಿಸಿದ್ದ ಶ್ರೀಲಂಕಾ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು, ತಂಡದ ಪ್ರಮುಖ ಬ್ಯಾಟ್ಸಮನ್ ಪತುಮ್ ನಿಸ್ಸಂಕಾ ಬೆನ್ನು ನೋವಿನಿಂದಾಗಿ 2ನೇ ಟೆಸ್ಟ್ನಿಂದ ಹೊರಗುಳಿದಿದ್ದಾರೆ.
ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಹೀನಾಯ ಸೋಲು ಕಂಡಿದ್ದ ಶ್ರೀಲಂಕಾ, ದ್ವಿತೀಯ ಟೆಸ್ಟ್ನಲ್ಲಿ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ. ಇದಕ್ಕಾಗಿ ಶ್ರೀಲಂಕಾ ತಯಾರಿ ಆರಂಭಿಸಿರುವ ಬೆನ್ನಲ್ಲೇ ತಂಡದ ಪ್ರಮುಖ ಬ್ಯಾಟ್ಸಮನ್ ಪತುಮ್ ನಿಸ್ಸಂಕಾ, ದ್ವಿತೀಯ ಟೆಸ್ಟ್ಗೆ ಅಲಭ್ಯರಾಗಿದ್ದಾರೆ.
ಪ್ರವಾಸಿ ಶ್ರೀಲಂಕಾ ತಂಡದ ಪ್ರಮುಖ ಬ್ಯಾಟ್ಸಮನ್ ಆಗಿರುವ ನಿಸ್ಸಂಕಾ, ಮೊದಲ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ತಂಡದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಪತುಮ್ ನಿಸ್ಸಂಕಾ, (61* ಹಾಗೂ 6) ಟೀಂ ಇಂಡಿಯಾ ಬೌಲರ್ಗಳ ವಿರುದ್ಧ ಸ್ವಲ್ಪಮಟ್ಟಿನ ಮೇಲುಗೈ ಸಾಧಿಸಿದ್ದರು. ಆದರೆ ಇದೀಗ ಪತುಮ್ ನಿಸ್ಸಂಕಾ ಅವರ ಅಲಭ್ಯತೆ ಶ್ರೀಲಂಕಾ ತಂಡಕ್ಕೆ ಆಘಾತ ನೀಡಿದೆ.
ಈ ನಡುವೆ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್ನಿಂದ ಹೊರಗುಳಿದಿದ್ದ ದುಶ್ಮಂತ ಚಮೀರ ಕೂಡ ಚೇತರಿಕೆ ಕಂಡಿಲ್ಲ. ಹೀಗಾಗಿ 2ನೇ ಟೆಸ್ಟ್ ಪಂದ್ಯದಲ್ಲೂ ಚಮೀರಾ, ಆಡುವುದು ಅನುಮಾನವಾಗಿದೆ. ಆದ್ದರಿಂದ ಪತುಮ್ ನಿಸ್ಸಂಕಾ ಸ್ಥಾನಕ್ಕೆ ದಿನೇಶ್ ಚಂದಿಮಾಲ್ ಅವರ ಪ್ಲೇಯಿಂಗ್ ಇಲವೆನ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಭಾರತ ಹಾಗೂ ಶ್ರೀಲಂಕಾ ನಡುವಿನ ದ್ವಿತೀಯ ಟೆಸ್ಟ್ ಮಾ.12ರಿಂದ 16ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಗಲು ರಾತ್ರಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕಾಗಿ ಎರಡು ತಂಡಗಳು ಈಗಾಗಲೇ ಸಜ್ಜಾಗಿವೆ.