ಮುಂದಿನ ಜೂನ್ನಲ್ಲಿ ಟೀಂ ಇಂಡಿಯಾ ವಿರುದ್ಧ ಭಾರತದಲ್ಲಿ ನಡೆಯುವ ಐದು ಪಂದ್ಯಗಳ ಟಿ20 ಸರಣಿಗೆ ಸೌತ್ ಆಫ್ರಿಕಾ ತಂಡವನ್ನ ಪ್ರಕಟಿಸಲಾಗಿದೆ.
ಭಾರತದ ಟಿ20 ಸವಾಲು ಎದುರಿಸಲು ತೆಂಬಾ ಬವುಮಾ ಸಾರಥ್ಯದಲ್ಲಿ ಸೌತ್ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಇತ್ತೀಚೆಗಷ್ಟೇ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಅನ್ರಿಕ್ ನೋಕಿಯೇ, ಸೌತ್ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಯ್ನ ಪಾರ್ನೆಲ್, 2017ರ ಇಂಗ್ಲೆಂಡ್ ಪ್ರವಾಸದ ಬಳಿಕ ಮೊದಲ ಬಾರಿಗೆ ಟಿ20 ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇವರೊಂದಿಗೆ ಪ್ರಸಕ್ತ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡಿರುವ ಟ್ರಿಸ್ಟನ್ ಸ್ಟಬ್ಸ್, ಭಾರತ ಪ್ರವಾಸ ಕೈಗೊಂಡಿರುವ ಸೌತ್ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 21 ವರ್ಷದ ಸ್ಟಬ್ಸ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದು, ಸೌತ್ ಆಫ್ರಿಕಾ ಟಿ20 ಚಾಲೆಂಜ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಆಡಿದ 7 ಇನ್ನಿಂಗ್ಸ್ನಲ್ಲಿ 48.83ರ ಸರಾಸರಿ ಹಾಗೂ 183.12ರ ಸ್ಟ್ರೈಕ್ ರೇಟ್ನಲ್ಲಿ 293 ರನ್ಗಳಿಸಿ ಮಿಂಚಿದ್ದರು. ಅಲ್ಲದೇ ಸೌತ್ ಆಫ್ರಿಕಾ ʼಎʼ ತಂಡದೊಂದಿಗೆ ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದ ಟ್ರಿಸ್ಟನ್ ಸ್ಟಬ್ಸ್, ಗಾಯದ ಸಮಸ್ಯೆಯಿಂದ ಹೊರಗುಳಿದ ಇಂಗ್ಲೆಂಡ್ ಆಟಗಾರ ಥೈಮಲ್ ಮಿಲ್ಸ್ ಅವರ ಬದಲಿಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರು.
ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ ಜೂನ್ 9ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿದೆ. ಉಳಿದಂತೆ ಕಟಕ್, ವಿಶಾಖಪಟ್ಟಣಂ, ರಾಜ್ಕೋಟ್ ಹಾಗೂ ಬೆಂಗಳೂರಿನಲ್ಲಿ ಸರಣಿಯ ಉಳಿದ ಪಂದ್ಯಗಳು ನಡೆಯಲಿದೆ.
ಸೌತ್ ಆಫ್ರಿಕಾ ತಂಡ:
ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿಕಾಕ್, ರಿಜಾ಼ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಂ, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಅನ್ರಿಕ್ ನೋಕಿಯೇ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗೀಸೋ ರಬಾಡ, ತಬ್ರೈಜ್ ಶಮ್ಸಿ, ಟ್ರಿಸ್ಟನ್ ಸ್ಟಬ್ಸ್, ರಸ್ಸಿ ವಿಡಿ ದುಸ್ಸೆನ್, ಮಾರ್ಕೊ ಜಾನ್ಸನ್