ಹಿಂದೊಮ್ಮೆ ಕಳಪೆ ಫಾರ್ಮ್ ಹಾಗೂ ಬೇಜವಾಬ್ದಾರಿಯ ಆಟದಿಂದ ಟೀಕೆಗೆ ಗುರಿಯಾಗಿದ್ದ ರಿಷಬ್ ಪಂತ್, ಇದೀಗ ಮತ್ತೊಮ್ಮೆ ತಮ್ಮ ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ಪಂತ್ ಅವರ ಈ ನೀರಸ ಪ್ರದರ್ಶನ ಟೀಂ ಇಂಡಿಯಾದಲ್ಲಿ ಅವರ ಸ್ಥಾನಕ್ಕೆ ಕುತ್ತು ತರುವುದೇ ಎಂಬ ಚರ್ಚೆ ಇದೀಗ ಕ್ರಿಕೆಟ್ ವಲಯದಲ್ಲಿ ಶುರುವಾಗಿದೆ.
ಪ್ರಮುಖ ಆಟಗಾರರ ಅನುಪಸ್ಥಿಯಲ್ಲಿ ತವರಿನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿರುವ ರಿಷಬ್ ಪಂತ್, ತಮ್ಮ ಕಳಪೆ ಬ್ಯಾಟಿಂಗ್‌ನಿಂದ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರ ಟೀಕೆಗೆ ಗುರಿಯಾಗಿದ್ದಾರೆ. ಪ್ರಸಕ್ತ ಸೀಸನ್‌ನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ರಿಷಬ್ ಪಂತ್, ಒಂದೇ ಒಂದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿಲ್ಲ. ಸರಣಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ 14.25ರ ಸರಾಸರಿಯಲ್ಲಿ ಕೇವಲ 57 ರನ್‌ಗಳಿಸಿದ್ದಾರೆ. ಒಂದೆಡೆ ನಾಯಕತ್ವದ ಒತ್ತಡ ಎದುರಿಸುತ್ತಿರುವ ರಿಷಬ್ ಪಂತ್, ಈ ಸರಣಿಯಲ್ಲಿ ಇಲ್ಲದ ಹೊಡೆತಕ್ಕೆ ಯತ್ನಿಸಿ ಸುಲಭವಾಗಿ ತಮ್ಮ ವಿಕೆಟ್ ಕೈಚೆಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ 29(16), 2ನೇ ಪಂದ್ಯದಲ್ಲಿ 5(7), 3ನೇ ಪಂದ್ಯದಲ್ಲಿ 6(8) ಹಾಗೂ 4ನೇ ಪಂದ್ಯದಲ್ಲಿ 17(23) ರನ್‌ಗಳಿಸಿದ್ದಾರೆ. ಈ ಅಂಕಿ ಅಂಶಗಳು ಟೀಂ ಇಂಡಿಯಾದಲ್ಲಿ ರಿಷಬ್ ಪಂತ್ ಅವರ ಸ್ಥಾನಕ್ಕೆ ಕುತ್ತುತರುವ ಸಾಧ್ಯತೆ ತಂದೊಡ್ಡಿದೆ.

ಪಂತ್ ಸ್ಥಾನಕ್ಕೇ ಪೈಪೋಟಿ:
ಆಸ್ಟ್ರೇಲಿಯಾದಲ್ಲಿ ವರ್ಷಾಂತ್ಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಸದ್ದಿಲ್ಲದೆ ತಯಾರಿ ಆರಂಭಿಸಿರುವ ಟೀಂ ಇಂಡಿಯಾ ಸೂಕ್ತ ಆಟಗಾರರ ಆಯ್ಕೆಗೆ ಮುಂದಾಗಿದೆ. ಇದರ ಬೆನ್ನಲ್ಲೇ ಭಾರತದ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದೆ. ಈ ರೇಸ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿ ಇರುವ ಇಶಾನ್ ಕಿಶನ್ ಮೊದಲ ಸ್ಥಾನದಲ್ಲಿದ್ದರೆ. ಟೀಂ ಇಂಡಿಯಾಕ್ಕೆ ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡಿರುವ ದಿನೇಶ್ ಕಾರ್ತಿಕ್ 2ನೇ ಸ್ಥಾನದಲ್ಲಿದ್ದಾರೆ. ಇವರ ಜೊತೆಗೆ ಸಂಜೂ ಸ್ಯಾಮ್ಸನ್ ಸಹ ಟಿ20 ವಿಶ್ವಕಪ್‌ಗೆ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಕಿಶಾನ್-ಕಾರ್ತಿಕ್-ಸ್ಯಾಮ್ಸನ್:
ಈ ಮೂವರಲ್ಲಿ ಇಶಾನ್ ಕಿಶನ್ ಹಾಗೂ ದಿನೇಶ್ ಕಾರ್ತಿಕ್ ಅವರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಪ್ರಸ್ತುತ ಸೌತ್ ಆಫ್ರಿಕಾ ಸರಣಿಯಲ್ಲಿ ಇಬ್ಬರು ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿದ್ದಾರೆ. ಸರಣಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ಇಶಾನ್ ಕಿಶನ್ 191 ರನ್‌ಗಳಿಸಿದ್ದರೆ, ದಿನೇಶ್ ಕಾರ್ತಿಕ್ ಸಹ 92 ರನ್‌ಗಳಿಸಿದ್ದಾರೆ. ಅಲ್ಲದೇ 4ನೇ ಟಿ20 ಪಂದ್ಯದಲ್ಲಿ ಸ್ಪೋಟಕ ಆಟವಾಡಿದ ದಿನೇಶ್ ಕಾರ್ತಿಕ್, ಟೀಂ ಇಂಡಿಯಾದ ಗೆಲುವಿನ ಹೀರೋ ಆಗಿದ್ದಾರೆ. ಮತ್ತೊಂದೆಡೆ ಮುಂಬರುವ ಐರ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿರುವ ಸಂಜೂ ಸ್ಯಾಮ್ಸನ್ ಸಹ ಸಿಕ್ಕಿರುವ ಅವಕಾಶ ಬಳಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.