ರಣಜಿ ಟ್ರೋಫಿ ಕ್ರಿಕೆಟ್ನಲ್ಲಿ ಮುಂಬೈ ಮತ್ತೊಮ್ಮೆ ಫೈನಲ್ ತಲುಪಿದೆ. ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ಉತ್ತರಪ್ರದೇಶ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ ಫೈನಲ್ ಪ್ರವೇಶ ಪಡೆದಿದೆ.
ಮುಂಬೈ ತನ್ನ ಮೊದಲ ಇನಿಂಗ್ಸ್ನಲ್ಲಿ 393 ರನ್ಗಳಿಸಿತ್ತು ಇದಕ್ಕುತ್ತರವಾಗಿ, ಉತ್ತರಪ್ರದೇಶ 180 ರನ್ ಗಳಿಗೆ ಆಲೌಟ್ ಆಗಿತ್ತು. 213 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದ್ದ ಮುಂಬೈ ಎರಡನೇ ಇನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು.

ಮುಂಬೈ ಎರಡನೇ ಇನಿಂಗ್ಸ್ನಲ್ಲಿ ನಾಯಕ ಪೃಥ್ವಿ ಶಾ 64, ಯಶಸ್ವಿ ಜೈಸ್ವಲ್ 181, ಅರ್ಮಾನ್ ಜಾಫರ್ 127 ರನ್ ಗಳಿಸಿದರು. ಪಂದ್ಯದ ಐದನೇ ದಿನ ವೆಟ್ ಔಟ್ ಫೀಲ್ಡ್ನಿಂದಾಗಿ ಪಂದ್ಯ ತಡವಾಗಿ ಆರಂಭವಾಯಿತು. ಬ್ಯಾಟಿಂಗ್ ಮುಂದುವರಿಸಿದ ಸರ್ಫರಾಜ್ ಖಾನ್ ಮತ್ತು ಶಂಸ್ ಮುಲಾನಿ ಯುಪಿ ಬೌಲರ್ಗಳ ಬೆಂಡೆತ್ತಿದರು.
ಸರ್ಫರಾಜ್ ಖಾನ್ ಅಜೇಯ 59 ರನ್ ಗಳಿಸಿದರು. ಮುಲಾನಿ ಅಜೇಯ 51 ರನ್ ಗಳಿಸಿದರು. ಮುಂಬೈ ಎರಡನೇ ಇನಿಂಗ್ಸ್ನಲ್ಲಿ 533 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಡಿಕ್ಲೇರ್ ಮಾಡಿತ್ತು. ಪಂದ್ಯದ ಫಲಿತಾಂಶ ಅಸಾಧ್ಯವಾಗಿದ್ದರಿಂದ ಪಂದ್ಯವನ್ನು ಇಲ್ಲಿಗೆ ನಿಲ್ಲಿಸಲಾಯಿತು. ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಮುಂಬೈ ಫೈನಲ್ ತಲುಪಿತು. ಫೈನಲ್ ಪಂದ್ಯವನ್ನು ಮುಂಬೈ ಬೆಂಗಳೂರಿನಲ್ಲಿ ಮಧ್ಯಪ್ರದೇಶ ವಿರುದ್ಧ ಆಡಲಿದೆ.