ರಾಂಚಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ODIನಲ್ಲಿ ಇಶಾನ್ ಕಿಶನ್ ತೋರಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ಮನ್ ಶುಭಮನ್ ಗಿಲ್ ಹೊಗಳಿದ್ದಾರೆ.
ಗೆಲ್ಲಲೇಬೇಕಾದ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್(93) ಟೀಂ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.
ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಅವರ ಅಮೋಘ ಬ್ಯಾಟಿಂಗ್ನಿಂದ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.
ಟೀಂ ಇಂಡಿಯಾ ಗೆಲುವಿನಲ್ಲಿ ಹೀರೋ ಆಗಿ ಮಿಂಚಿದ ಇಶಾನ್ ಕಿಶನ್ ಪ್ರದರ್ಶನದ ಬಗ್ಗೆ ಯುವ ಆಟಗಾರ ಶುಭ್ಮನ್ ಗಿಲ್ ವಿಶೇಷ ರೀತಿಯಲ್ಲಿ ಬಣ್ಣಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ ಒಂದನ್ನು ಪೋಸ್ಟ್ ಮಾಡಿರುವ ಗಿಲ್, ಬಾಲಿವುಡ್ ಚಲನಚಿತ್ರ ‘ವಿಕ್ರಮ್ ವೇದ’ ಶೈಲಿಯಲ್ಲಿ ಕಿಶನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ʼವಿಕ್ರಮ್ ವೇದʼ ಚಿತ್ರದಲ್ಲಿ ಬರುವ ʼಶತಕ್ʼ ಪಾತ್ರಧಾರಿಗೆ ಇಶಾನ್ ಕಿಶನ್ ಅವರನ್ನ ಹೋಲಿಸಿರುವ ಶುಭ್ಮನ್ ಗಿಲ್, “Well played, my Shatak #VikramVedha.” ಎಂದು ತಮ್ಮ ಪೋಸ್ಟ್ಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಜೊತೆಗೆ ರೀಲ್ ಹಿನ್ನೆಲೆಯಲ್ಲಿ ವಿಕ್ರಮ್ ವೇದ ಚಿತ್ರದ ಮ್ಯೂಸಿಕ್ ಸಹ ಅಳವಡಿಸಿದ್ದಾರೆ.
ಶುಭ್ಮನ್ ಗಿಲ್ ಮಾಡಿರುವ ಇನ್ಸ್ಟಾಗ್ರಾಂ ಪೋಸ್ಟ್ಗೆ ಇಶಾನ್ ಕಿಶನ್ ಸೇರಿದಂತೆ ಟೀಂ ಇಂಡಿಯಾದ ಆಟಗಾರರಾದ ವೇಗಿ ಆವೇಶ್ ಖಾನ್, ಆಲ್ರೌಂಡರ್ ಕೃನಾಲ್ ಪಾಂಡ್ಯ ಸೇರಿದಂತೆ ಹಲವರು ಸಹ ಕಮೆಂಟ್ ಮಾಡಿದ್ದಾರೆ. ಅಲ್ಲದೇ ʼವಿಕ್ರಮ್ ವೇದʼ ಚಿತ್ರದಲ್ಲಿ ʼಶತಕ್ʼ ಪಾತ್ರದಲ್ಲಿ ಅಭಿನಯಿಸಿರುವ ರೋಹಿತ್ ಸರಫ್ ಕೂಡ ಕಮೆಂಟ್ ಮಾಡಿದ್ದಾರೆ.
IND v SA ODI