ಸೌತ್ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟಿ20 ಸರಣಿಗೆ ಭಾರತದ 18 ಮಂದಿ ಆಟಗಾರರ ತಂಡವನ್ನ ಪ್ರಕಟಿಸಲಾಗಿದ್ದು, ರೋಹಿತ್ ಶರ್ಮ ವಿಶ್ರಾಂತಿ ಹಿನ್ನೆಲೆಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌ಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. 5 ಪಂದ್ಯಗಳ ಈ ಸರಣಿಗೆ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರ ಹಾಗೂ ಮೊಹಮ್ಮದ್ ಶಮಿ ಅವರುಗಳಿಗೆ ವಿಶ್ರಾಂತಿ ನೀಡಲಾಗಿದೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ವಿಕೆಟ್-ಬ್ಯಾಟ್ಸ್‌ಮನ್ ಕೀಪರ್ ದಿನೇಶ್ ಕಾರ್ತಿಕ್ ಅವರುಗಳು ಟೀಂ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಮಿಂಚಿರುವ ಎಡಗೈ ವೇಗಿ ಅರ್ಶದೀಪ್ ಸಿಂಗ್ ಹಾಗೂ ʼಸ್ಪೀಡ್ ಸ್ಟಾರ್ʼ ಉಮ್ರಾನ್ ಮಲ್ಲಿಕ್ ಅವರುಗಳು ಮೊದಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಟೀಂ ಇಂಡಿಯಾದ ನಾಯಕತ್ವದ ಜವಾಬ್ದಾರಿ ಕೆ.ಎಲ್.ರಾಹುಲ್ ಹೆಗಲಿಗೆ ನೀಡಲಾಗಿದ್ದರೆ, ರಿಷಬ್ ಪಂತ್ ಅವರನ್ನ ಉಪ-ನಾಯಕನಾಗಿ ನೇಮಿಸಲಾಗಿದೆ. ಉಳಿದಂತೆ ಋತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಅವರು ಭಾರತ ತಂಡದಲ್ಲಿ ತಮ್ಮ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಸಹ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇವರೊಂದಿಗೆ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಸ್ಥಾನ ಪಡೆದಿದ್ದರೆ. 2022ರ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಲಕ್ನೋ ತಂಡದ ಆಲ್ರೌಂಡರ್ ದೀಪಕ್ ಹೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಕಮ್‌ಬ್ಯಾಕ್ ಮಾಡಿದ ಡಿಕೆ:
2022ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಅದ್ಭುತ ಪ್ರದರ್ಶನ ನೀಡಿರುವ ದಿನೇಶ್ ಕಾರ್ತಿಕ್, 2019ರ ವಿಶ್ವಕಪ್ ನಂತರ ಮೊದಲ ಬಾರಿಗೆ ಟೀಂ ಇಂಡಿಯಾ ಜರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಈ ಸೀಸನ್‌ನಲ್ಲಿ ಸ್ಪೋಟಕ ಬ್ಯಾಟಿಂಗ್‌ನಿಂದ ಕಮಾಲ್ ಮಾಡಿರುವ ಡಿಕೆ, 191.33ರ ಸ್ಟ್ರೈಕ್‌ರೇಟ್ ಮೂಲಕ 57.54ರ ಸರಾಸರಿಯಲ್ಲಿ 287 ರನ್‌ಗಳಿಸಿದ್ದಾರೆ. ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಲು ಸಾಕಷ್ಟು ಪರಿಶ್ರಮ ಹಾಕಿರುವ ದಿನೇಶ್ ಕಾರ್ತಿಕ್, ನಿರೀಕ್ಷೆಗೆ ತಕ್ಕಂತೆ ತಂಡಕ್ಕೆ ಮರಳಿದ್ದಾರೆ.
ಭಾರತ ತಂಡ(ಟಿ20 ತಂಡ): ಕೆ.ಎಲ್.ರಾಹುಲ್(ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜು಼ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ಉಮ್ರಾನ್ ಮಲ್ಲಿಕ್.