ಐಸಿಸಿ ಏಕದಿನ ವಿಶ್ವಕಪ್ ಆರಂಭಕ್ಕೆ ಎರಡು ದಿನಗಳಷ್ಟೇ ಬಾಕಿ ಉಳಿದಿದ್ದು, ವಿಶ್ವಕಪ್ ಹಿನ್ನೆಲೆಯಲ್ಲಿ ಇಂದು ನಡೆಯುತ್ತಿರುವ ಕೊನೆಯ ಅಭ್ಯಾಸ ಪಂದ್ಯದಲ್ಲಿ ಭಾರತ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿ ನಡೆಸುತ್ತಿವೆ.
ನೆದರ್ಲೆಂಡ್ಸ್ ವಿರುದ್ಧದ ಅಭ್ಯಾಸ ಪಂದ್ಯದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಆಟಗಾರರು ತಿರುವನಂತಪುರಂಗೆ ಆಗಮಿಸಿದೆ. ಈ ಹಿಂದೆ ಇಂಗ್ಲೆಂಡ್ ವಿರುದ್ಧ ಗುವಾಹತಿಯಲ್ಲಿ ನಡೆಯಬೇಕಿದ್ದ ಭಾರತದ ಮೊದಲ ಅಭ್ಯಾಸ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಹೀಗಾಗಿ ಈವರೆಗೂ ಅಭ್ಯಾಸದಲ್ಲಿ ಕಣಕ್ಕಿಳಿಯಲು ಸಾಧ್ಯವಾಗದ ಭಾರತ ತಂಡಕ್ಕೆ ಇಂದು ಕಣಕ್ಕಿಳಿಯುವ ಅವಕಾಶ ಲಭಿಸುವ ನಿರೀಕ್ಷೆ ಹೊಂದಲಾಗಿದೆ.
ಭಾರತ ತಂಡ ಇತ್ತೀಚೆಗೆ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆಲುವಿನ ಆತ್ಮವಿಶ್ವಾಸದಲ್ಲಿದೆ. ಹೀಗಾಗಿ ಅ.8ರಂದು ಚೆನ್ನೈನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ 2023ರ ಏಕದಿನ ವಿಶ್ವಕಪ್ ಅಭಿಯಾನ ಆರಂಭಿಸಲು ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ ಎದುರು ನೋಡುತ್ತಿದೆ. ಹೀಗಾಗಿ ಆರಂಭಿಕ ಪಂದ್ಯಕ್ಕಾಗಿ ಭಾರತೀಯ ಆಟಗಾರರಿಗೆ ಹೆಚ್ಚಿನ ಅಭ್ಯಾಸದ ಅಗತ್ಯವಿಲ್ಲ. ಆದರೆ ತಂಡದ ಕೆಲ ಆಟಗಾರರು ವಿಶ್ವಕಪ್ ಆರಂಭಕ್ಕೂ ಮುನ್ನ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಲಯ ಕಂಡುಕೊಳ್ಳಲು ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಬೇಕಿದೆ.
ಮತ್ತೊಂದೆಡೆ ನೆದರ್ಲೆಂಡ್ಸ್ ಈಗಾಗಲೇ ಗ್ರೀನ್ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತನ್ನ ಅಭ್ಯಾಸ ಪಂದ್ಯವನ್ನು ಆಡಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಅವರಿಗೆ ಹ್ಯಾಟ್ರಿಕ್ ವಿಕೆಟ್ ನೀಡುವ ಮೂಲಕ ನಿರಾಸೆ ಅನುಭವಿಸಿತ್ತು. ಆದರೆ ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಏಕದಿನ ವಿಶ್ವಕಪ್ನ ಪ್ರಮುಖ ಪಂದ್ಯಗಳ ಆರಂಭಕ್ಕೆ ಮುನ್ನ ನೆದರ್ಲೆಂಡ್ಸ್ ಕೂಡ ಉತ್ತಮ ಅಭ್ಯಾಸ ಪಡೆಯಲು ಸಜ್ಜಾಗಿದೆ.
ಇಂದು ಮಳೆಯ ಆತಂಕ:
ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ನಡೆದ ಹಲವು ಅಭ್ಯಾಸ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದ್ದು, ಇಂದು ನಡೆಯುವ ಭಾರತ ಹಾಗೂ ನೆದರ್ಲೆಂಡ್ಸ್ ತಂಡಗಳ ನಡುವಿನ ಪಂದ್ಯಕ್ಕೂ ಮಳೆಯ ಆತಂಕ ಎದುರಾಗಿದೆ. ಎರಡು ತಂಡಗಳ ಅಭ್ಯಾಸ ಪಂದ್ಯ ತಿರುವನಂತಪುರಂನಲ್ಲಿ ನಡೆಯಲಿದ್ದು, ಈ ಭಾಗದಲ್ಲಿ ಇಂದು ದಿನವಿಡೀ ಮಳೆಯಾಗುವ ನಿರೀಕ್ಷೆಯಿದೆ.
IND v NED, World Cup, Team India, Netherlands, ODI Cricket