ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(100) ಭರ್ಜರಿ ಶತಕ ಹಾಗೂ ರವಿ ಬಿಷ್ಣೋಯಿ(3/24), ಅವೇಶ್ ಖಾನ್(3/32) ಅವರುಗಳ ಅತ್ಯುತ್ತಮ ಬೌಲಿಂಗ್ ದಾಳಿಯ ನೆರವಿನಿಂದ ಏಷ್ಯನ್ ಗೇಮ್ಸ್-2023 ಕ್ವಾರ್ಟರ್ ಫೈನಲ್ನಲ್ಲಿ ನೇಪಾಳ ತಂಡವನ್ನ ಮಣಿಸಿದ ಭಾರತ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 20 ಓವರ್ಗಳಲ್ಲಿ 4 ವಿಕೆಟ್ಗೆ 202 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಟಾರ್ಗೆಟ್ ಬೆನ್ನತ್ತಿದ ನೇಪಾಳ 20 ಓವರ್ಗಳಲ್ಲಿ 179/9 ರನ್ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 23 ರನ್ಗಳ ಗೆಲುವು ಸಾಧಿಸಿದ ಟೀಂ ಇಂಡಿಯಾ, ಏಷ್ಯನ್ ಗೇಮ್ಸ್ನ ಸೆಮಿಫೈನಲ್ಗೆ ಲಗ್ಗೆಯಿಟ್ಟಿತು.
ಜೈಸ್ವಾಲ್ ಚೊಚ್ಚಲ ಶತಕ:
ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(100 ರನ್, 49 ಬಾಲ್, 8 ಬೌಂಡರಿ, 7 ಸಿಕ್ಸ್) ಆಸರೆಯಾದರು. ಇನ್ನಿಂಗ್ಸ್ ಆರಂಭಿದಿಂದಲೂ ಬಿರುಸಿನ ಬ್ಯಾಟಿಂಗ್ ಮೂಲಕ ನೇಪಾಳ ಬೌಲರ್ಗಳ ಮೇಲೆ ಹಿಡಿತ ಸಾಧಿಸಿದ ಜೈಸ್ವಾಲ್, ಟಿ20 ಕ್ರಿಕೆಟ್ನಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಅಲ್ಲದೇ ನಾಯಕ ಋತುರಾಜ್ ಗಾಯಕ್ವಾಡ್(25) ಜೊತೆಗೂಡಿ ಮೊದಲ ವಿಕೆಟ್ಗೆ 103 ರನ್ಗಳ ಶತಕದ ಜೊತೆಯಾಟವಾಡಿದರು. ಆದರೆ ಋತುರಾಜ್ ಹಾಗೂ ಜೈಸ್ವಾಲ್ ವಿಕೆಟ್ ಪತನದ ನಂತರದಲ್ಲಿ ಬಂದ ತಿಲಕ್ ವರ್ಮ(2) ಹಾಗೂ ಜಿತೇಶ್ ಶರ್ಮ(5) ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಶಿವಂ ದುಬೆ(25*) ಹಾಗೂ ರಿಂಕು ಸಿಂಗ್(37*) ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನ 202ಕ್ಕೆ ಹೆಚ್ಚಿಸಿದರು. ನೇಪಾಳ ಪರ ದಿಪೇಂದ್ರ ಸಿಂಗ್ 2, ಸೋಂಪಾಲ್ ಹಾಗೂ ಲಾಮಿಚನೆ ತಲಾ 1 ವಿಕೆಟ್ ಪಡೆದರು.
ಬಿಷ್ಣೋಯಿ-ಅವೇಶ್ ದಾಳಿ:
ಭಾರತ ನೀಡಿದ 203 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ನೇಪಾಳ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ದಿಪೇಂದ್ರ ಸಿಂಗ್(32), ಸುಂದೀಪ್ ಜೊರಾ(29) ಹಾಗೂ ಕುಶಾಲ್ ಮಲ್ಲಾ(29) ಅವರುಗಳ ಉತ್ತಮ ಆಟದ ನಡುವೆಯೂ 20 ಓವರ್ಗಳಲ್ಲಿ 179 ರನ್ಗಳಿಸಲಷ್ಟೇ ಸಾಧ್ಯವಾಯಿತು. ಭಾರತದ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ರವಿ ಬಿಷ್ಣೋಯಿ 3 ಹಾಗೂ ಅವೇಶ್ ಖಾನ್ 3 ವಿಕೆಟ್ ಪಡೆದು ಮಿಂಚಿದರೆ. ಅರ್ಶದೀಪ್ 2 ಹಾಗೂ ಸಾಯಿ ಕಿಶೋರ್ 1 ವಿಕೆಟ್ ಪಡೆದುಕೊಂಡರು.
Asian Games, Team India, Nepal, Asian Games, Quarterfinal