ಇಂಗ್ಲೆಂಡ್ ವಿರುದ್ಧ ಆಡಬೇಕಿರುವ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡವನ್ನ ಪ್ರಕಟಿಸಲಾಗಿದೆ. ಕೌಂಟಿ ಕ್ರಿಕೆಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ಚೇತೇಶ್ವರ್ ಪುಜಾರ, ಮತ್ತೊಮ್ಮೆ ರೋಹಿತ್ ಶರ್ಮ ನಾಯಕತ್ವದ ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆ 2021ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಭಾರತ, ಕೋವಿಡ್-19 ಕಾರಣದಿಂದ ಅಂತಿಮ ಟೆಸ್ಟ್ ಪಂದ್ಯವನ್ನ ಮೊಟಕುಗೊಳಿಸಿತ್ತು. 2022ರಲ್ಲಿ ಫೈನಲ್ ಟೆಸ್ಟ್ ಪಂದ್ಯವಾಡುವ ಭರವಸೆ ನೀಡಿದ್ದ ಭಾರತ, ಇದೀಗ ಮತ್ತೊಮ್ಮೆ ಇಂಗ್ಲೆಂಡ್‌ಗೆ ತೆರಳಲಿದೆ. ರೋಹಿತ್ ಶರ್ಮ ನಾಯಕತ್ವದಲ್ಲಿ ಮೊದಲ ಬಾರಿಗೆ ವಿದೇಶಿ ಪ್ರವಾಸ ಕೈಗೊಳ್ಳಲಿರುವ ಭಾರತ, ಜುಲೈ 1-5ರವರೆಗೆ ನಡೆಯಲಿರುವ ಟೆಸ್ಟ್ ಪಂದ್ಯವನ್ನಾಡಲಿದೆ.
ಫಾರ್ಮ್ ಸಮಸ್ಯೆಯಿಂದ ಭಾರತದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಚೇತೇಶ್ವರ್ ಪುಜಾರ, ತಂಡಕ್ಕೆ ಮರಳಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಪುಜಾರ, ಕಮ್ ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿದ್ದ ಶ್ರೇಯಸ್ ಅಯ್ಯರ್ ಮತ್ತೊಮ್ಮೆ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಲಂಕಾ ವಿರುದ್ಧ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್, ತಂಡಕ್ಕೆ ಆಸರೆಯಾಗಿದ್ದರು. ಇದೀಗ ಇವರು ಮತ್ತೊಮ್ಮೆ ಅಜಿಂಕ್ಯಾ ರಹಾನೆ ಅವರ ಜಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮತ್ತೊಂದೆಡೆ ಭಾರತದ ವಿರುದ್ಧ ಫೈನಲ್ ಟೆಸ್ಟ್ ಪಂದ್ಯವನ್ನು ಆಡಲಿರುವ ಇಂಗ್ಲೆಂಡ್ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹೊಸ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ನಾಯಕತ್ವ ಹಾಗೂ ಬ್ರೆಂಡನ್ ಮೆಕ್ಕಲಂ ಮಾರ್ಗದರ್ಶನದೊಂದಿಗೆ ಇಂಗ್ಲೆಂಡ್, ಭಾರತ ತಂಡವನ್ನ ಎದುರಿಸಲಿದೆ.
ಭಾರತ ಟೆಸ್ಟ್ ತಂಡ:
ರೋಹಿತ್ ಶರ್ಮ(ನಾಯಕ), ಕೆ.ಎಲ್.ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ್ ಪುಜಾರ, ರಿಷಬ್ ಪಂತ್, ಕೆ.ಎಸ್.ಭರತ್, ರವೀಂದ್ರ ಜಡೇಜಾ, ಆರ್. ಅಶ್ವಿನ್, ಶಾರ್ದೂಲ್ ಥಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ ಕೃಷ್ಣ.