ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್ರೌಂಡರ್ ಅಕ್ಸರ್ ಪಟೇಲ್ ಹೊರಗುಳಿದಿದ್ದಾರೆ.
ಉಭಯ ತಂಡಗಳ ನಡುವಿನ 3ನೇ ಏಕದಿನ ಪಂದ್ಯ ಸೆ.27ರಂದು ರಾಜ್ಕೋಟ್ನಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಅಕ್ಸರ್ ಪಟೇಲ್ ತಂಡಕ್ಕೆ ಮರಳುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ಅಂತಿಮ ಏಕದಿನ ಪಂದ್ಯಕ್ಕೂ ಅಕ್ಸರ್ ಪಟೇಲ್ ಅಲಭ್ಯರಾಗಿದ್ದಾರೆ. ಅಕ್ಸರ್ ಪಟೇಲ್ ಸದ್ಯ ಬೆಂಗಳೂರಿನಲ್ಲಿರುವ ನ್ಯಾಷಿನಲ್ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ಆಸೀಸ್ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳಿಂದ ಅಕ್ಸರ್ ಪಟೇಲ್ ಹೊರಗುಳಿದ ಪರಿಣಾಮ ರವಿಚಂದ್ರನ್ ಅಶ್ವಿನ್ ಅವರಿಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಲಭಿಸಿತ್ತು. ಅಲ್ಲದೇ ತಮಗೆ ದೊರೆತ ಈ ಅವಕಾಶವನ್ನ ಸೂಕ್ತ ರೀತಿಯಲ್ಲಿ ಬಳಸಿಕೊಂಡಿದ್ದ ಅಶ್ವಿನ್, ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದೀಗ ಮೂರನೇ ಪಂದ್ಯಕ್ಕೂ ಅಕ್ಸರ್ ಪಟೇಲ್ ಅಲಭ್ಯವಾಗಿರುವುದರಿಂದ ಈ ಪಂದ್ಯಕ್ಕೂ ಸಹ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಮತ್ತೊಂದೆಡೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅಕ್ಸರ್ ಪಟೇಲ್ ಅವರ ಸ್ಥಾನದಲ್ಲಿ ಆರ್. ಅಶ್ವಿನ್ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿದ್ದಾರೆ. ಆದರೆ ಬಿಸಿಸಿಐ ಮೂಲಗಳ ಪ್ರಕಾರ ಈಗಾಗಲೇ ಏಕದಿನ ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಅಕ್ಸರ್ ಪಟೇಲ್, ಪಂದ್ಯಾವಳಿ ಆರಂಭದ ವೇಳೆಗೆ ತಂಡಕ್ಕೆ ಮರಳುವ ವಿಶ್ವಾಸವಿದ್ದು, ಈ ತಿಂಗಳ ಅಂತ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಅಕ್ಸರ್ ಪಟೇಲ್ ಆಡುವ ಸಾಧ್ಯತೆ ಕೂಡ ಇದೆ.
IND v AUS, Team India, Axar Patel, ODI Series, Australia