ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ತೋರಿದ ಅದ್ಭುತ ಆಲ್ರೌಂಡರ್ ಪ್ರದರ್ಶನದಿಂದಾಗಿ ಟೀಂ ಇಂಡಿಯಾದ ರಾಕ್ ಸ್ಟಾರ್ ರವೀಂದ್ರ ಜಡೇಜಾ, ಐಸಿಸಿ ಟೆಸ್ಟ್ ಆಲ್ರೌಂಡರ್ಗಳ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.
ಮೊಹಾಲಿಯಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಕಮಾಲ್ ಮಾಡಿದ್ದ ರವೀಂದ್ರ ಜಡೇಜಾ, ಭಾರತದ ಗೆಲುವಿನ ಹೀರೋ ಆಗಿ ಮಿಂಚಿದ್ದರು. ಜಡೇಜಾ ಅವರ ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ಗೆ ಐಸಿಸಿ ಟೆಸ್ಟ್ ಕ್ರಿಕೆಟ್ನ ನಂ.1 ಆಲ್ರೌಂಡರ್ ಪಟ್ಟ ತಂದುಕೊಟ್ಟಿದೆ. ತಮ್ಮ ಕ್ರಿಕೆಟ್ ಬದುಕಿನ ಶ್ರೇಷ್ಠ ಪ್ರದರ್ಶನ ನೀಡಿರುವ ರವೀಂದ್ರ ಜಡೇಜಾ, ಆಲ್ರೌಂಡರ್ ಪಟ್ಟಿಯಲ್ಲಿ ಎರಡು ಸ್ಥಾನ ಬಡ್ತಿ ಪಡೆಯುವ ಮೂಲಕ ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ ಅವರನ್ನ ಹಿಂದಿಕ್ಕಿ, ಅಗ್ರ ಸ್ಥಾನಕ್ಕೇರಿದ್ದಾರೆ. ಆದರೆ ಮೊದಲ ಟೆಸ್ಟ್ನಲ್ಲಿ ತೋರಿದ ಉತ್ತಮ ಪ್ರದರ್ಶನದ ನಡುವೆಯೂ ಆರ್. ಅಶ್ವಿನ್, 2ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮೊಹಾಲಿ ಟೆಸ್ಟ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ರವೀಂದ್ರ ಜಡೇಜಾ, ಮೊದಲ ಇನ್ನಿಂಗ್ಸ್ನಲ್ಲಿ ಅಜೇಯ 175 ರನ್ಗಳಿಸುವ ಮೂಲಕ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರ ದಾಖಲೆ ಮುರಿದಿದ್ದರು. ಇನ್ನು ಬೌಲಿಂಗ್ನಲ್ಲಿ ಕೈಚಳಕ ತೋರಿದ ಜಡೇಜಾ, ಮೊದಲ ಇನ್ನಿಂಗ್ಸ್ನಲ್ಲಿ 5 ಹಾಗೂ 2ನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಒಟ್ಟು 9 ವಿಕೆಟ್ ಪಡೆದು ಮಿಂಚಿದ್ದರು. ರವೀಂದ್ರ ಜಡೇಜಾ ಅವರ ಈ ಪ್ರದರ್ಶನದಿಂದ ಟೀಂ ಇಂಡಿಯಾ ಮೊದಲ ಟೆಸ್ಟ್ನಲ್ಲಿ ಇನ್ನಿಂಗ್ಸ್ ಹಾಗೂ 222 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ವಿರಾಟ್ ಕೊಹ್ಲಿಗೆ 2ಸ್ಥಾನ ಬಡ್ತಿ
ಅಂತೆಯೇ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಐಸಿಸಿ ಟೆಸ್ಟ್ ಬ್ಯಾಟ್ಸಮನ್ಗಳ ಶ್ರೇಯಾಂಕದಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ 6ನೇ ಸ್ಥಾನಕ್ಕೆ ಕುಸಿದರೆ, ರಿಷಬ್ ಪಂತ್ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾದ ಮಾರ್ನಸ್ ಲಬುಸ್ಚೆಗ್ನೆ, ನಂ.1 ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ 2ನೇ ಸ್ಥಾನದಲ್ಲಿದ್ದರೆ, ಜಸ್ಪ್ರೀತ್ ಬುಮ್ರಾ 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.