ಆರಂಭದ 10 ಓವರುಗಳಲ್ಲಿ ನಮಿಬಿಯಾ ಕಿವೀಸ್ ಬ್ಯಾಟ್ಸ್ಮನ್ಗಳ ಮೇಲೆ ಹಿಡಿತ ಸಾಧಿಸಿತ್ತು. ಆದರೆ ನಂತರ ನ್ಯೂಜಿಲೆಂಡ್ ಅಬ್ಬರದ ಮುಂದೆ ಅಕ್ಷರಶಃ ತಣ್ಣಗಾಯಿತು. ಬ್ಯಾಟಿಂಗ್ನಲ್ಲೂ ಎಡವಿತು. 52 ರನ್ಗಳ ಭರ್ಜರಿ ಜಯ ದಾಖಲಿಸಿದ ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.
ಶಾರ್ಜಾದಲ್ಲಿ ಟಾಸ್ ಗೆದ್ದ ನಮಿಬಿಯಾ ಫೀಲ್ಡಿಂಗ್ ಆರಿಸಿಕೊಂಡಿತು. ಸ್ಲೋ ಪಿಚ್ ಲಾಭ ಪಡೆದ ನಮಿಬಿಯಾ ಬೌಲರ್ಗಳು ಮಾರ್ಟಿನ್ ಗಪ್ಟಿಲ್ ಮತ್ತು ಡೆರಿಲ್ ಮಿಚೆಲ್ಗೆ ಕಡಿವಾಣ ಹಾಕಿದರು. ಗಪ್ಟಿಲ್ 18 ರನ್ಗಳಿಸಿದರೆ, ಮಿಚೆಲ್ 19 ರನ್ಗಳಿಸಿದರು. ಕೇನ್ ವಿಲಿಯಮ್ಸನ್ 28 ರನ್ ಮತ್ತು ಡೆವೊನ್ ಕಾನ್ವೆ 17 ರನ್ಗಳಿಸಿ ಔಟಾದಾಗ ಕಿವೀಸ್ ಪಾಳಯದಲ್ಲಿ ಕೊಂಚ ಆತಂಕ ಎದುರಾಗಿತ್ತು.
ಗ್ಲೆನ್ ಫಿಲಿಪ್ಸ್ ಮತ್ತು ಜೇಮಿ ನಿಶಾನ್ ನಮಿಬಿಯಾ ಲೆಕ್ಕಾಚಾರವನ್ನೇ ಬದಲಿಸಿದರು. ಇಬ್ಬರು 5ನೇ ವಿಕೆಟ್ಗೆ ಸ್ಪೋಟಕ 76 ರನ್ ಜೊತೆಯಾಟ ಆಡಿದರು. ಫಿಲಿಪ್ಸ್ 21 ಎಸೆತಗಳಲ್ಲಿ ಅಜೇಯ 39 ರನ್ಗಳಿಸಿದರೆ, ನಿಶಾಮ್ 23 ಎಸೆತಗಳಲ್ಲಿ ಅಜೇಯ 35 ರನ್ಗಳಿಸಿದರು. 20 ಓವರುಗಳಲ್ಲಿ ನ್ಯೂಜಿಲೆಂಡ್ 4 ವಿಕೆಟ್ ಕಳೆದುಕೊಂಡು 163 ರನ್ಗಳಿಸಿತು.
ಶಾರ್ಜಾದಲ್ಲಿ ಕಷ್ಟ ಎನಿಸಿದ್ದ ಗುರಿ ಬೆನ್ನಟ್ಟಲು ಹೊರಟ ನಮಬಿಯಾ ವೇಗದ ಆಟ ಆಡಲು ವಿಫಲವಾಯಿತು. ಸ್ಟೀಫನ್ ಬಾರ್ಡ್ (21 ರನ್) ಮತ್ತು ಮೈಕಲ್ ವಾನ್ ಲಿಂಜನ್ (25 ರನ್) ಉತ್ತಮ ಆರಂಭ ಒಡೆದರೂ ವೇಗ ಇರಲಿಲ್ಲ. ಉಳಿದಂತೆ ಗ್ರೀನ್ 23 ರನ್ ಮತ್ತು ಡೇವಿಡ್ ವೀಸ್ 16 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಹೆಚ್ಚಿನ ಕೊಡುಗೆ ಬರಲಿಲ್ಲ. ನಮಿಬಿಯ 20 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 111 ರನ್ ಮಾತ್ರಗಳಿಸಿತ್ತು. ಕಿವೀಸ್ 52 ರನ್ಗಳ ಪ್ರಚಂಡ ಜಯ ದಾಖಲಿಸಿತು.