ದಕ್ಷಿಣ ಆಫ್ರಿಕಾದ ಬೌಲರ್ಗಳು ಪಂದ್ಯವನ್ನು ಗೆಲ್ಲಿಸಿಕೊಡುತ್ತಿರುವುದು ಹೊಸತಲ್ಲ. ಆದರೆ ಬಾಂಗ್ಲಾದೇಶದ ವಿರುದ್ಧ ನೀಡಿದ ಪ್ರದರ್ಶನ ಮಾತ್ರ ದಕ್ಷಿಣ ಆಫ್ರಿಕಾದ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದೆ. ಕಗಿಸೊ ರಬಾಡ, ಅನ್ರಿಚ್ ನೋರ್ಟ್ಜೆ ಮತ್ತು ತಬ್ರೈಜ್ ಶಂಸಿ ದಾಳಿಗೆ ತತ್ತರಿಸಿದ ಬಾಂಗ್ಲಾ ಜಸ್ಟ್ 84 ರನ್ಗಳಿಗೆ ಆಲೌಟ್ ಆಯಿತು. ಇದನ್ನು ಚೇಸ್ ಮಾಡಿದ ಹರಿಣಗಳು 13.3 ಓವರುಗಳಲ್ಲಿ ಗುರಿ ಮುಟ್ಟಿ 6 ವಿಕೆಟ್ಗಳ ಭರ್ಜರಿ ಜಯ ದಾಖಲಿಸುವುದರ ಜೊತೆಗೆ ರನ್ ರೇಟ್ ಕೂಡ ಹೆಚ್ಚುಗೊಳಿಸಿತು.
ಅಬುಧಾಬಿಯಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬಾಂಗ್ಲಾದೇಶಕ್ಕೆ ಬ್ಯಾಟಿಂಗ್ ನಡೆಸಲು ಹೇಳಿತು. ಕಗಿಸೊ ರಬಾಡಾ ಮೊಹಮ್ಮದ್ ನಯೀಮ್(9 ರನ್), ಸೌಮ್ಯ ಸರ್ಕಾರ್ (0) ಮತ್ತು ಮುಷ್ಫಿಕರ್ ರಹೀಂ (0) ವಿಕೆಟ್ ಕಣ್ಣು ಮುಚ್ಚಿ ಬಿಡವಷ್ಟರಲ್ಲಿ ಕಬಳಿಸಿದ್ದರು. ಮೊಹಮ್ಮದುಲ್ಲಾ (3 ರನ್) ಮತ್ತು ಆಸೀಫ್ ಹೊಸೈನ್ (0) ಕೂಡ ಹೆಚ್ಚು ಹೊತ್ತು ಬಾಳಲಿಲ್ಲ. ಮೆಹದಿ ಹಸನ್ 27 ರನ್ಗಳಿಸಿದರೆ ಲಿಟನ್ ದಾಸ್ 24 ರನ್ಗಳಿಸಿದರು. ಬಾಂಗ್ಲಾದೇಶ 18.2 ಓವರುಗಳಲ್ಲಿ 84 ರನ್ಗಳಿಗೆ ಆಲೌಟ್ ಆಯಿತು. ರಬಾಡಾ ಮತ್ತು ನೋರ್ಟ್ಜೆ ತಲಾ 3 ವಿಕೆಟ್ ಪಡೆದು ಮಿಂಚಿದರು.
ಚೇಸಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ರಿಜಾ ಹೆಂಡ್ರಿಕ್ಸ್ ( 4ರನ್), ಕ್ವಿಂಟನ್ ಡಿ ಕಾಕ್ (16 ರನ್) ಮತ್ತು ಏಡಿಯನ್ ಮಾರ್ಕ್ ರಾಂ (0) ವಿಕೆಟ್ ಬೇಗನೆ ಕಳೆದುಕೊಂಡಿತು. ರಾಸಿ ವಾಂಡರ್ ಡ್ಯುಸನ್ 22 ರನ್ಗಳಿಸಿ ಔಟಾದರು. ನಾಯಕ ಬವುಮಾ ಅಜೇಯ 31 ರನ್ಗಳಿಗೆ ತಂಡಕ್ಕೆ 13.3 ಓವರುಗಳಲ್ಲಿ ತಂಡಕ್ಕೆ 6 ವಿಕೆಟ್ಗಳ ಗೆಲುವು ತಂದುಕೊಟ್ಟರು.