Sourav Ganguly – ನಾನು ನನ್ನ ಕೆಲಸ ಮಾಡುತ್ತೇನೆ.. ಯಾರಿಗೂ ಉತ್ತರ ನೀಡುವ ಅಗತ್ಯವಿಲ್ಲ – ಸೌರವ್ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇತ್ತೀಚಿನ ದಿನಗಳಲ್ಲಿ ವಿವಾದ – ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ. ಮುಖ್ಯವಾಗಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕತ್ವದಿಂದ ಕೆಳಗಿಳಿಯಲು ಮುಖ್ಯ ಕಾರಣ ಸೌರವ್ ಗಂಗೂಲಿ ಅಂತ ಹೇಳಲಾಗುತ್ತಿತ್ತು.
ಇನ್ನೊಂದೆಡೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಆಯ್ಕೆ ಸಮಿತಿಯ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. ತಂಡದ ಆಯ್ಕೆಯಲ್ಲಿ ಪ್ರಭಾವ ಬೀರುತ್ತಿದ್ದಾರೆ ಅನ್ನೋ ಆರೋಪವೂ ಕೇಳಬಂದಿತ್ತು. ಮತ್ತೊಂದೆಡೆ ಸೌರವ್ ಗಂಗೂಲಿ ಅಧಿಕಾರದವಧಿಯಲ್ಲಿ ಮಹಿಳಾ ಕ್ರಿಕೆಟ್ ಗೆ ಹೆಚ್ಚಿನ ಆದ್ಯತೆ ನೀಡಿಲ್ಲ ಎಂಬ ಟೀಕೆಗಳು ಇವೆ.
ಇದೀಗ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸೌರವ್ ಗಂಗೂಲಿ ಅವರು ಎಲ್ಲಾ ಟೀಕೆ, ಆರೋಪ, ವಿವಾದಗಳಿಗೂ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.
ಕಳೆದ 26 ತಿಂಗಳುಗಳಿಂದ ಬಿಸಿಸಿಐ ಆಡಳಿತ ನಡೆಸುತ್ತಿರುವ ಸೌರವ್ ಗಂಗೂಲಿ ಕೋವಿಡ್ ಸಂಕಷ್ಟ ಕಾಲದಲ್ಲಿ ಕ್ರಿಕೆಟ್ ಆಟಕ್ಕೆ ಒಂಚೂರು ದಕ್ಕೆ ಬರದಂತೆ ನೋಡಿಕೊಂಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಆಯ್ಕೆ ಸಮಿತಿ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಆರೋಪಕ್ಕೆ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಫೋಟೋ ಆಯ್ಕೆ ಸಮಿತಿಯ ಸಭೆಯದ್ದು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ಚಿತ್ರದಲ್ಲಿ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ, ಜೈ ಶಾ, ಜಯೇಶ್ ಜಾರ್ಜ್ ಇದ್ದಾರೆ. ಇದು ಆಯ್ಕೆ ಸಮಿತಿಯ ಸಭೆಯದ್ದಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಹಾಗಂತ ಎಲ್ಲಾ ಆರೋಪ, ಟೀಕೆಗಳಿಗೆ ಉತ್ತರ ನೀಡಬೇಕು ಎಂಬುದು ನನಗೆ ಅನ್ನಿಸುತ್ತಿಲ್ಲ. ನಾನು ಬಿಸಿಸಿಐನ ಅಧ್ಯಕ್ಷ. ನನ್ನ ಕೆಲಸ ಏನು ಎಂಬುದು ನನಗೆ ಗೊತ್ತಿದೆ. ನಾನು ಏನು ಮಾಡಬೇಕು ಎಂಬುದು ಕೂಡ ತಿಳಿದಿದೆ. ಈ ಹಿಂದಿನ ಬಿಸಿಸಿಐ ಅಧ್ಯಕ್ಷರು ಯಾವ ರೀತಿಯ ಜವಾಬ್ದಾರಿ ಮತ್ತು ಕೆಲಸ ಮಾಡುತ್ತಿದ್ರೋ ಅದನ್ನೇ ನಾನು ಕೂಡ ಮಾಡಿದ್ದೇನೆ. ಎಲ್ಲದಕ್ಕೂ ಉತ್ತರ ನೀಡುವ ಅನಿವಾರ್ಯತೆ ನನಗಿಲ್ಲ ಎಂದು ಖಡಕ್ ಆಗಿಯೇ ಗಂಗೂಲಿ ಹೇಳಿದ್ದಾರೆ.
ಇನ್ನು ಜೈ ಶಾ ಜೊತೆಗಿನ ಸಂಬಂಧ ಬಗ್ಗೆಯೂ ಮಾತನಾಡಿದ ಗಂಗೂಲಿ, ನನ್ನ ಮತ್ತು ಜೈ ಶಾ ಅವರ ನಡುವಿನ ಸಂಬಂಧ ಚೆನ್ನಾಗಿಯೇ ಇದೆ. ಜೈ ಶಾ ನನ್ನ ಆಪ್ತ ಸ್ನೇಹಿತ, ನಂಬಿಕಸ್ಥ ಸಹದ್ಯೋಗಿ. ನಾನು, ಜೈ ಶಾ, ಅರುಣ್ ಧೂಮಾಲ್, ಜಯೇಶ್ ಜಾರ್ಜ್ ಎಲ್ಲರೂ ಜೊತೆಯಾಗಿ ಕೆಲಸ ಮಾಡಿದ್ದೇವೆ. ಮುಖ್ಯವಾಗಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ . ಅದು ಕೂಡ ಕೋವಿಡ್ ಸಂಕಷ್ಟದ ಸಮಯದಲ್ಲಿ ಒಂದು ತಂಡವಾಗಿ ಕೆಲಸ ಮಾಡಿದ್ದೇವೆ ಎಂದು ಗಂಗೂಲಿ ಹೇಳಿದ್ದಾರೆ.
ಇನ್ನು ಭಾರತದ ಮುಂದಿನ ಟೆಸ್ಟ್ ಕ್ಯಾಪ್ಟನ್ ಯಾರು ಅನ್ನೋ ಪ್ರಶ್ನೆಗೆ, ಆಯ್ಕೆ ಸಮಿತಿ ಸೂಕ್ತ ಆಟಗಾರರನ್ನು ಟೆಸ್ಟ್ ತಂಡಕ್ಕೆ ನಾಯಕನಾಗಿ ಆಯ್ಕೆ ಮಾಡುತ್ತಾರೆ. ಅದೇ ರೀತಿ ಆಯ್ಕೆ ಸಮಿತಿ ಕೂಡ ಬಿಸಿಸಿಐ ಪದಾಧಿಕಾರಿಗಳ ಜೊತೆ ಚರ್ಚೆ ಮಾಡುತ್ತಾರೆ ಅಂತಾರೆ ಸೌರವ್ ಗಂಗೂಲಿ.
ಇನ್ನೊಂದೆಡೆ ರಹಾನೆ ಮತ್ತು ಪೂಜಾರ ಅವರು ರಣಜಿ ಟೂರ್ನಿಯಲ್ಲಿ ಆಡಬೇಕು ಎಂದು ಗಂಗೂಲಿ ಹೇಳಿದ್ರು. ಹಾಗಾದ್ರೆ ರಹಾನೆ ಮತ್ತು ಪೂಜಾರ ಅವರನ್ನು ಶ್ರೀಲಂಕಾ ಟೆಸ್ಟ್ ಸರಣಿಯಿಂದ ಹೊರಗಿಡಲಾಗುತ್ತಾ ಅನ್ನೋ ಪ್ರಶ್ನೆಗೆ ಗಂಗೂಲಿ ಉತ್ತರಿಸಿದ್ದು ಹೀಗೆ. ನಾನು ಹೇಳಿದ್ದು ರಣಜಿ ಪಂದ್ಯಗಳಲ್ಲಿ ರಹಾನೆ ಮತ್ತು ಪೂಜಾರ ಆಡಬೇಕು ಎಂದು. ಶ್ರೀಲಂಕಾ ಸರಣಿಗಿಂತ ಮುನ್ನವೇ ರಣಜಿ ಟೂರ್ನಿ ಆರಂಭವಾಗುತ್ತದೆ. ಫೆಬ್ರವರಿ ಮೂರನೇ ವಾರದಿಂದ ಎಲೈಟ್ ಗುಂಪಿನ ಪಂದ್ಯ ಆರಂಭವಾಗುತ್ತದೆ. ಶ್ರೀಲಂಕಾ ವಿರುದ್ದದ ಟೆಸ್ಟ್ ಸರಣಿ ಮಾರ್ಚ್ ನಲ್ಲಿ ನಡೆಯಲಿದೆ. ಇನ್ನು ರಹಾನೆ ಮತ್ತು ಪೂಜಾರ ಅವರನ್ನು ತಂಡಕ್ಕೆ ಆಯ್ಕೆ ಮಾಡೋದು ಬಿಡೋದು ಆಯ್ಕೆ ಸಮಿತಿ ನಿರ್ಧಾರ ಮಾಡುತ್ತದೆ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.