IPL 2022- RCB – Dinesh Karthik – ಪತ್ನಿಯ ಮೋಸ.. ಪ್ರಾಣ ಸ್ನೇಹಿತನ ದ್ರೋಹ.. ದೇವದಾಸ್ ಆಗಿದ್ದ ಡಿಕೆ ಸಕ್ಸಸ್ ಸ್ಟೋರಿ
ಸೋಲು.. ಅವಮಾನವೇ ಯಶಸ್ಸಿನ ಮೆಟ್ಟಿಲು. ಅದೃಷ್ಟ, ಪ್ರತಿಭೆ ಎಷ್ಟೇ ಇರಲಿ, ಬದುಕಿನಲ್ಲಿ ಸೋಲು, ಅಪಮಾನವನ್ನು ಸಹಿಸಿಕೊಂಡು ಮುನ್ನಡೆದಾಗಲೇ ಯಶ ಸಾಧಿಸಲು ಸಾಧ್ಯ. ಇದಕ್ಕೆ ದಿನೇಶ್ ಕಾರ್ತಿಕ್ ಕೂಡ ಹೊರತಲ್ಲ.
ಹೌದು, ದಿನೇಶ್ ಕಾರ್ತಿಕ್ ಅಪ್ರತಿಮ ಪ್ರತಿಭಾವಂತ ಕ್ರಿಕೆಟಿಗ. ಪ್ರತಿಭೆಯ ಜೊತೆಗೆ ಅದೃಷ್ಟವೂ ದಿನೇಶ್ ಕಾರ್ತಿಕ್ ಬೆನ್ನಿಗೆ ನಿಂತಿತ್ತು. ಎಲ್ಲವೂ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂದಾಗಲೇ ನಸೀಬು ಕೂಡ ಕೆಟ್ಟು ಹೋಯ್ತು. ನಂತರ ಅನುಭವಿಸಿದ್ದು ಯಾತನೆ, ಬೇಸರ, ಅಪಮಾನ. ಕೈ ಹಿಡಿದ ಹೆಂಡತಿ ಮೋಸ ಮಾಡಿದ್ದಳು. ಆಪ್ತ ಗೆಳೆಯನೇ ವಂಚನೆ ಮಾಡಿದ್ದ. ಇನ್ನೇನು ಬದುಕು ಮುಗಿದು ಹೋಯ್ತು ಅನ್ನುವಷ್ಟರಲ್ಲೇ ಕೈ ಹಿಡಿದು ಮುನ್ನಡೆಸಿದ್ದು ಮತ್ತೊಬ್ಬಳು ಹೆಣ್ಣು. ಬಳಿಕ ಅವಳಿ ಮಕ್ಕಳ ತಂದೆ.. ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಕಟ್ಟಿಕೊಂಡ ಕನಸು ಈಡೇರಿತ್ತು. ಬದುಕಿನ ಚಿತ್ರಣವೇ ಬದಲಾಗಿ ಹೋಯ್ತು. ಮೋಸ, ಅಪಮಾನ ಮಾಡಿದವರ ಎದುರಲ್ಲೇ ಯಶಸ್ಸಿನ ಉತ್ತುಂಗಕ್ಕೇರಿದ್ದ ಕಥೆ ನಮ್ಮ ದಿನೇಶ್ ಕಾರ್ತಿಕ್ ಅವರದ್ದು.
ದಿನೇಶ್ ಕಾರ್ತಿಕ್ ಅವರದ್ದು ತೆಲುಗು ಕುಟುಂಬ. ಹುಟ್ಟಿದ್ದು ಚೆನ್ನೈ ನಲ್ಲಿ. ಕೆಲ ಸಮಯ ಬೆಳೆದಿದ್ದು ಕುವೈಟ್ ನಲ್ಲಿ. ಅಂದ ಹಾಗೇ ದಿನೇಶ್ ಕಾರ್ತಿಕ್ ಅವರ ತಂದೆ ಕೃಷ್ಣ ಕುಮರ್ ಚೆನ್ನೈ ಫಸ್ಟ್ ಡಿವಿಷನ್ ನಲ್ಲಿ ಕ್ರಿಕೆಟ್ ಆಡುತ್ತಿದ್ದರು. ನಂತರ ಬದುಕು ಕಟ್ಟಿಕೊಳ್ಳಲು ಕುವೈಟ್ ನಲ್ಲೂ ಕೆಲಸ ಮಾಡಿದ್ದರು.
ದಿನೇಶ್ ಕಾರ್ತಿಕ್ ಗೆ ಹತ್ತು ವರ್ಷ ಆದಾಗ ಕೃಷ್ಣ ಕುಮಾರ್ ಅವರು ಮತ್ತೆ ಚೆನ್ನೈನಲ್ಲಿ ವಾಸ ಮಾಡಲು ನಿರ್ಧರಿಸಿದ್ದರು. ತನ್ನ ಮಗನನ್ನು ಕ್ರಿಕೆಟ್ ಆಟಗಾರನ್ನಾಗಿ ರೂಪಿಸಬೇಕು ಎಂಬ ಆಸೆಯನ್ನಿಟ್ಟುಕೊಂಡಿದ್ದರು. ತಂದೆಯ ಆಸೆಯಂತೆ ದಿನೇಶ್ ಕಾರ್ತಿಕ್ ಕೂಡ ಬದ್ದತೆಯಿಂದಲೇ ಕ್ರಿಕೆಟ್ ಆಡುತ್ತಿದ್ದರು. ವಿವಿಧ ವಯೋಮಿತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ದಿನೇಶ್ ಕಾರ್ತಿಕ್ 2002ರಲ್ಲಿ ತಮಿಳುನಾಡು ರಣಜಿ ತಂಡದಲ್ಲೂ ಸ್ಥಾನ ಪಡೆದುಕೊಂಡ್ರು.
ಅದ್ಭುತ ವಿಕೆಟ್ ಕೀಪಿಂಗ್ ಮತ್ತು ಅಮೋಘ ಬ್ಯಾಟಿಂಗ್ ನಿಂದ ಗಮನ ಸೆಳೆದ ದಿನೇಶ್ ಕಾರ್ತಿಕ್ 2004ರಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡ್ರು.
ಆದ್ರೆ ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ದಿನೇಶ್ ಕಾರ್ತಿಕ್ ಅವರ ನಸೀಬು ಕೂಡ ಸರಿ ಇರಲಿಲ್ಲ ಅನ್ಸುತ್ತೆ. ಅಷ್ಟರಲ್ಲೇ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ಮಹೇಂದ್ರ ಸಿಂಗ್ ಧೋನಿ ಅವರು ದಿನೇಶ್ ಕಾರ್ತಿಕ್ ಸ್ಥಾನವನ್ನು ಆಕ್ರಮಿಸಿಕೊಂಡ್ರು. ನಂತರ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಗೆ ಬಂದು ಹೋಗುವ ಆತಿಥಿಯಾಗಿದ್ದರು. ಧೋನಿಯ ಪ್ರಭಾವಳಿಯಿಂದಾಗಿ ದಿನೇಶ್ ಕಾರ್ತಿಕ್ ಗೆ ಸರಿಯಾದ ಅವಕಾಶವೂ ಸಿಗಲಿಲ್ಲ. ಹಾಗೇ ಬ್ಯಾಟರ್ ಆಗಿಯೂ ಯಶ ಸಾಧಿಸಲಿಲ್ಲ.
ಈ ನಡುವೆ 2007ರಲ್ಲಿ ದಿನೇಶ್ ಕಾರ್ತಿಕ್ ಅವರು ನಿಖಿತಾ ವಂಜರಾ ಅವರನ್ನು ವಿವಾಹವಾದ್ರು. ಆದ್ರೆ ನಿಖಿತ ಅವರು ದಿನೇಶ್ ಕಾರ್ತಿಕ್ ಬಾಳಿಗೆ ತಂಗಾಳಿಯಾಗುವ ಬದಲು ಬಿರುಗಾಳಿಯನ್ನೇ ಎಬ್ಬಿಸಿದ್ರು. ದಿನೇಶ್ ಕಾರ್ತಿಕ್ ಆಪ್ತ ಗೆಳೆಯ ಮುರಳಿ ವಿಜಯ್ ಜೊತೆ ಸಂಬಂಧವನ್ನು ಬೆಳೆಸಿಕೊಂಡಿದ್ದ ನಿಖಿತಾ ಅವರು 2012ರಲ್ಲಿ ದಿನೇಶ್ ಕಾರ್ತಿಕ್ ಅವರಿಂದ ದೂರವಾಗಿಬಿಟ್ಟರು.
ಹೆಂಡತಿ ಮತ್ತು ಆಪ್ತ ಗೆಳೆಯ ಮಾಡಿದ್ದ ವಂಚನೆ ಮತ್ತು ಮೋಸದಿಂದ ದಿನೇಶ್ ಕಾರ್ತಿಕ್ ತುಂಬಾನೇ ಆಘಾತ ಅನುಭವಿಸಿದ್ದರು. ತನಗೆ ಯಾವುದು ಬೇಡ ಎಂದು ಏಕಾಂತದಿಂದಲೇ ವಾಸ ಮಾಡುತ್ತಿದ್ದರು. ಕ್ರಿಕೆಟ್, ಜಿಮ್ ಎಲ್ಲವನ್ನು ಬಿಟ್ಟುಬಿಟ್ಟ ದಿನೇಶ್ ಕಾರ್ತಿಕ್ ಬದುಕು ಮುಗಿದು ಹೋಯ್ತು ಅನ್ನುವಷ್ಟರಲ್ಲಿ ತಂಗಾಳಿಯಂತೆ ಬಂದಿದ್ದು ದೀಪಿಕಾ ಪಲ್ಲಿಕಲ್. how heartbroken Dinesh Karthik found true love in Deepika Pallikal
ದೀಪಿಕಾ ಪಲ್ಲಿಕಲ್ ಭಾರತೀಯ ಸ್ಕ್ವಾಷ್ ಆಟಗಾರ್ತಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ದೀಪಿಕಾ ಅವರು, ದಿನೇಶ್ ಕಾರ್ತಿಕ್ ಜಿಮ್ ನಲ್ಲೇ ಫಿಟ್ ನೆಸ್ ಅಭ್ಯಾಸ ನಡೆಸುತ್ತಿದ್ದರು. ಜಿಮ್ ನ ಟ್ರೈನರ್ ಮತ್ತು ದೀಪಿಕಾ ಅವರು ದಿನೇಶ್ ಕಾರ್ತಿಕ್ ಅವರ ಮನಸು ಬದಲಾವಣೆ ಮಾಡುವಂತೆ ಮಾಡಿದ್ದರು. ಕಂಗೆಟ್ಟಿದ್ದ ದಿನೇಶ್ ಕಾರ್ತಿಕ್ ಅವರ ಬದುಕಿಗೆ ಸ್ಪೂರ್ತಿ ತುಂಬಿದ್ದ ದೀಪಿಕಾ ಪಲ್ಲಿಕಲ್ ಅವರನ್ನು 2015ರಲ್ಲಿ ವಿವಾಹವಾದ್ರು.
ನಂತರ ದಿನೇಶ್ ಕಾರ್ತಿಕ್ ಬದುಕಿನಲ್ಲಿ ನಡೆದಿದ್ದು ಎಲ್ಲವೂ ಅಚ್ಚರಿ. ಕೈ ಬಿಟ್ಟು ಹೋಗಿದ್ದ ಕ್ರಿಕೆಟ್ ಆಟ ದಿನೇಶ್ ಕಾರ್ತಿಕ್ ಅವರಿಗೆ ಎಲ್ಲವನ್ನು ನೀಡಿತ್ತು. ಕೈ ತಪ್ಪಿದ್ದ ತಮಿಳುನಾಡು ಕ್ರಿಕೆಟ್ ತಂಡದ ನಾಯಕನಾದ್ರು. ಅಷ್ಟೇ ಅಲ್ಲ, ಟೀಮ್ ಇಂಡಿಯಾಗೂ ಕಮ್ ಬ್ಯಾಕ್ ಮಾಡಿದ್ರು. ಇನ್ನೊಂದೆಡೆ ಐಪಿಎಲ್ ನಲ್ಲಿ ಕೆಕೆಆರ್ ತಂಡದ ಸಾರಥಿಯೂ ಆದ್ರು. ಇನ್ನೊಂದೆಡೆ ಚೆನ್ನೈನ ಹೈ ಫೈ ಏರಿಯಾದಲ್ಲೇ ಕನಸಿನ ಮನೆಯನ್ನು ನಿರ್ಮಿಸಿದ್ರು. 2021ರಲ್ಲಿ ಅವಳಿ ಮಕ್ಕಳ ತಂದೆಯಾದ್ರು. ಬದುಕಿನಲ್ಲಿ ಏನಾದ್ರೂ ಸಾಧಿಸಬೇಕು ಎಂಬ ಹಠಕ್ಕೆ ಬಿದ್ದ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಅವರು ಈಗ ಯಶಸ್ಸಿನ ಉತ್ತುಂಗಕ್ಕೇರುತ್ತಿದ್ದಾರೆ.
ಆರು ತಿಂಗಳ ಬಾಣಂತಿಯಾಗಿದ್ದ ದೀಪಿಕಾ ಅವರು ಅಂತಾರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್ ಷಿಪ್ ನಲ್ಲಿ ಡಬಲ್ ಚಿನ್ನದ ಪದ ಗೆದ್ದುಕೊಂಡಿದ್ದಾರೆ. ಇನ್ನೊಂದೆಡೆ ದಿನೇಶ್ ಕಾರ್ತಿಕ್ ಅವರು ಆರ್ ಸಿಬಿ ತಂಡದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮುತ್ತಿದ್ದಾರೆ. ಅಷ್ಟೇ ಅಲ್ಲ, ಮತ್ತೆ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡುವ ಹಾದಿಯಲ್ಲೂ ಇದ್ದಾರೆ.
ಇನ್ನು ಐಪಿಎಲ್ ನಲ್ಲಿ ಚೆನ್ನೈ ತಂಡದ ಪರ ಆಡಬೇಕು ಎಂಬ ಆಸೆ ಇದ್ರೂ ಅದು ಈಡೇರಲಿಲ್ಲ. ಆದ್ರೆ ದಿನೇಶ್ ಕಾರ್ತಿಕ್ ಅವರನ್ನು ಕೈ ಹಿಡಿದಿದ್ದು ನಮ್ಮ ಆರ್ ಸಿಬಿ. ಆರ್ ಸಿಬಿ ಹೆಡ್ ಕೋಚ್ ಸಂಜಯ್ ಬಂಗಾರ್ ಅವರ ಮಾತನ್ನು ಕಟ್ಟಪ್ಪನಂತೆ ಪರಿಪಾಲಿಸುತ್ತಿರುವ ದಿನೇಶ್ ಕಾರ್ತಿಕ್ ಅವರು ಆರ್ ಸಿಬಿ ಅಭಿಮಾನಿಗಳ ಪಾಲಿಗೆ ಪ್ರೀತಿಯ ಡಿ.ಕೆ. ಸಾಹೇಬ ಆಗಿದ್ದಾರೆ.