ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನ 102ನೇ ಪಂದ್ಯದಲ್ಲಿ ತಮಿಳು ತಲೈವಾಸ್ ತಂಡವನ್ನು ಹರಿಯಾಣ ಸ್ಟೀಲರ್ಸ್ ಮಣಿಸಿ ಅಬ್ಬರಿಸಿತು.
ಮಂಗಳವಾರ ನಡೆದ ಪಂದ್ಯದಲ್ಲಿ ಹರಿಯಾಣ 37-29 ರಿಂದ ತಮಿಳು ತಂಡವನ್ನು ಮಣಿಸಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದೆ. ಈ ಮೂಲಕ ಹರಿಯಾಣ ಆಡಿದ 18 ಪಂದ್ಯಗಳಲ್ಲಿ 9 ಜಯ, 6 ಸೋಲು, 3 ಡ್ರಾ ಸಾಧಿಸಿದ್ದು 58 ಅಂಕಗಳನ್ನು ಕಲೆ ಹಾಕಿದ್ದು ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ತಮಿಳು ತಲೈವಾಸ್ 17 ಪಂದ್ಯಗಳಿಂದ 45 ಅಂಕ ಕಲೆ ಹಾಕಿದ್ದು ಎಂಟನೇ ಸ್ಥಾನದಲ್ಲಿದೆ.
ಮೊದಲಾವಧಿಯ ಪಂದ್ಯದಿಂದಲೂ ಹರಿಯಾಣ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಸ್ಟೀಲರ್ಸ್ 15-12 ರಿಂದ ಮುನ್ನಡೆಯಿತು. ಈ ಅವಧಿಯಲ್ಲಿ ತಮಿಳು ತಲೈವಾಸ್ ಒಂದು ಬಾರಿ ಆಲೌಟ್ ಆಯಿತು. ಎರಡನೇ ಅವಧಿಯ ಆಟವಧಿಯಲ್ಲೂ ಹರಿಯಾಣ ಅಂಕಗಳಿಕೆಗೆ ಚುರುಕು ಮುಟ್ಟಿಸಿತು. ಈ ಅವಧಿಯಲ್ಲಿ 15 ಅಂಕಗಳನ್ನು ದಾಳಿಯಲ್ಲಿ ಸಂಪಾದಿಸಿತು. ಅಲ್ಲದೆ ಈ ಅವಧಿಯಲ್ಲಿ ಎದುರಾಳಿ ತಂಡವನ್ನು ಆಲೌಟ್ ಮಾಡಿದ ಸ್ಟೀಲರ್ಸ್ ಅಬ್ಬರಿಸಿತು.
ಒಟ್ಟಾರೆ ಪಂದ್ಯದಲ್ಲಿ ತಲೈವಾಸ್ 42 ಬಾರಿ ದಾಳಿ ನಡೆಸಿ 17 ಅಂಕ ಸೇರಿಸಿತು. ಹರಿಯಾಣ 43 ಪ್ರಯತ್ನದಲ್ಲಿ 18 ಬಾರಿ ಯಶ ಕಂಡಿತು ಅಲ್ಲದೆ 3 ಬಾರಿ ಸೂಪರ್ ರೈಡ್ ಅಂಕ ಸೇರಿಸಿತು. ಟ್ಯಾಕಲ್ ನಲ್ಲಿ ತಲೈವಾಸ್ 7 ಅಂಕ ಸೇರಿಸಿದರೆ, ಹರಿಯಾಣ 9 ಅಂಕ ಪೇರಿಸಿತು.
ವಿಜೇತ ತಂಡದ ಪರ ಆಶೀಶ್ 16, ವಿಕಾಸ್ ಕಂಡೋಲಾ 8 ಅಂಕ ಪೇರಿಸಿದರು. ಪರಾಜಿತ ತಂಡದ ಪರ ಮಂಜಿತ್ 10, ಅಜಿಂಕ್ಯ ಪವಾರ್ 8 ಅಂಕ ಸೇರಿಸಿ ಸೋಲಿನಲ್ಲಿ ಮಿಂಚಿದರು.