ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಲೀಗ್ ಆರಂಭವಾಗಿದೆ. ಈ ಲೀಗ್ ನಲ್ಲಿ ಅಬ್ಬರಿಸಿ ಆಸ್ಟ್ರೇಲಿಯಾ ಫ್ಲೈಟ್ ಏರಲು ಪ್ಲೇಯರ್ಸ್ ಪ್ಲಾನ್ ಮಾಡಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮೌನಕ್ಕೆ ಜಾರಿದ್ದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಟಿ-20 ವಿಶ್ವಕಪ್ ತಂಡದಲ್ಲಿ ತಮ್ಮದೂ ಒಂದು ಕರ್ಚಿಫ್ ಹಾಕಿದ್ದಾರೆ.
ಹೌದು.. ಇವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಬಂದಾಗ ಇವರನ್ನು ದಿಗ್ಗಜ ಆಲ್ ರೌಂಡರ್ ಗಳ ಜೊತೆ ಹೋಲಿಕೆ ಮಾಡುತ್ತಿದ್ದರು. ಆದರೆ ಗಾಯ, ಫಿಟ್ನೆಸ್ ಹಾಗೂ ವಿವಾದಗಳು ಹಾರ್ದಿಕ್ ಅವರನ್ನು ಸುತ್ತವರೆದವು. ಇದು ಅವರ ಕ್ರಿಕೆಟ್ ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರಲು ಆರಂಭಿಸಿತು. ಒಂದು ಟೈಮ್ ನಲ್ಲಿ ಹಾರ್ದಿಕ್ ಇಲ್ಲದಿದ್ದರೆ ನಡೆಯದು ಎನ್ನುವ ಟೀಮ್ ಇಂಡಿಯಾಕ್ಕೆ ಇವರು ಸಮಯ ಸಾಗಿದ ಹಾಗೆ ಹೊರೆ ಆಗ ತೊಡಗಿದರು.

ಹಾರ್ದಿಕ್ ಪಾಂಡ್ಯ ಹೀಗೆ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವ ಆಟಗಾರ ಅಲ್ಲವೇ ಅಲ್ಲ. ಹಠ…ಛಲ ಎರಡನ್ನು ಬೆನ್ನಿಗೆ ಕಟ್ಟಿಕೊಂಡಿರುವ ಬೇತಾಳಂತೆ ಶ್ರಮಿಸುವ ಪ್ಲೇಯರ್. ಇವರ ಕ್ಷಮತೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಲಯ ಎನ್ನುವ ಮಾಯಾಜಿಂಕೆ ಇವರನ್ನು ಇನ್ನಿಲ್ಲದಂತೆ ಸತಾಯಿಸಿದೆ. ದೇಶಿಯ ಕ್ರಿಕೆಟ್ ಆಡಲೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೂಚನೆ ನೀಡಿದರೂ, ಡೋಂಟ್ ಕೇರ್ ಎಂದ, ಹಾರ್ದಿಕ್ ಭರ್ಜರಿ ತಾಲೀಮು ನಡೆಸಿದರು. ಇದರ ಪ್ರತಿಫಲ ಮೊದಲ ಪಂದ್ಯದಲ್ಲಿ ಕಂಡು ಬಂದಿದೆ.

ಇನ್ನು ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಗೆ ತಂಡ ಆಲ್ ಮೋಸ್ಟ್ ಫಿಕ್ಸ್ ಆಗಿದೆ. ಆದರೆ ಉಳಿದ ಮೂರ್ನಾಲ್ಕು ಸ್ಪಾಟ್ ಗಳಿಗೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಈ ರೇಸ್ ಗೆ ಮತ್ತೆ ಹಾರ್ದಿಕ್ ಪಾಂಡ್ಯ ಕಮ್ ಬ್ಯಾಕ್ ಮಾಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವತ್ತ ದೃಷ್ಟಿ ನೆಟ್ಟಿದ್ದಾರೆ. ದುಬೈನಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ಪಾಂಡ್ಯ, ಈಗ ಮೈದಾನದಲ್ಲಿ ಅವುಗಳಿಗೆ ಉತ್ತರ ನೀಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಜವಾಬ್ದಾರಿಯನ್ನು ಅವರು ಸ್ವತಃ ಅರಿತು ಪವರ್ ಪ್ಲೇ ಮುಗಿದ ಬಳಿಕ ಏಳನೇ ಓವರ್ ಬೌಲಿಂಗ್ ಮಾಡಲು ಮುಂದಾದರು. ಬಿಗುವಿನ ದಾಳಿ ನಡೆಸುವಲ್ಲಿ ಮೊದಲ ಪಂದ್ಯದಲ್ಲಿ ಹಾರ್ದಿಕ್ ವಿಫಲರಾದರೂ ಸಹ, ಕಮ್ ಬ್ಯಾಕ್ ಗೆ ರೆಡಿ ಎನ್ನುವ ಸೂಚನೆ ನೀಡಿದ್ದಾರೆ. ಇನ್ನು ಬ್ಯಾಟಿಂಗ್ ನಲ್ಲೂ ಹಾರ್ದಿಕ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ತಂಡಕ್ಕೆ ನೆರವಾಗಿದ್ದಾರೆ. ಈ ಮೂಲಕ ಉಳಿದ ಆಟಗಾರರು ರಿಲ್ಯಾಕ್ಸ್ ಆಗಿ ಆಡಲಿ ಎಂದು ಹೇಳಿದ್ದಾರೆ. ಆದರೆ ಅಸಲಿಗೆ ಕಥೆನೆ ಬೇರೆ ಇದೆ. ಹಾರ್ದಿಕ್ ಟೀಮ್ ಇಂಡಿಯಾದ ನಾಲ್ಕನೇ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ.
ಕಳೆದ ಐಪಿಎಲ್ ನಲ್ಲಿ ಮಿಂಚಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ವೆಂಕಟೇಶ್ ಅಯ್ಯರ್ ತವರಿನಲ್ಲಿ ನಡೆದ ಸರಣಿಯಲ್ಲಿ ಅಬ್ಬರಿಸಿದ್ದರು. ವೇಗವಾಗಿ ಬೌಲಿಂಗ್ ಹಾಗೂ ಬಿರುಸಿನ ಬ್ಯಾಟಿಂಗ್ ಮಾಡಬಲ್ಲ ಕ್ಷಮತೆಯನ್ನು ಸಾಬೀತು ಪಡಿಸಿದ್ದರು. ಆದರೆ ಹಾರ್ದಿಕ್ ಅವರು ಲಯಕ್ಕೆ ಮರಳಿರುವುದು ನಿಜಕ್ಕೂ ವೆಂಕಟೇಶ್ ಗೆ ಕಂಠಕವಾಗಲಿದೆ.
ಹಾರ್ದಿಕ್ ಮಾಡುವ ಬೌಲಿಂಗ್ ಶೈಲಿ ಆಸ್ಟ್ರೇಲಿಯಾ ಪಿಚ್ ಗೆ ಸೂಟ್ ಆಗುತ್ತದೆ. ಬೌನ್ಸ್ ಬಳಸಿಕೊಂಡು ಎದುರಾಳಿಗಳಿಗೆ ಖೆಡ್ಡಾ ತೋಡಬಲ್ಲರು. ಅಲ್ಲದೆ ವೆಂಕಟೇಶ್ ಅಯ್ಯರ್ ಅವರಿಗಿಂತಲೂ ವೇಗವಾಗಿ ಬೌಲಿಂಗ್ ಮಾಡಬಲ್ಲರು. ಇನ್ನು ಪವರ್ ಹಿಟಿಂಗ್ ವಿಷಯದ ಬಗ್ಗೆ ಯೋಚನೆ ಬೇಡವೇ ಬೇಡ. ಇವರು ಸಲೀಸಾಗಿ ಆಸೀಸ್ ಗ್ರ್ಯಾಂಡ್ ಗಳನ್ನು ಕ್ಲೀಯರ್ ಮಾಡುವ ಪವರ್ ಹೊಂದಿದ್ದಾರೆ. ಹೀಗಾಗಿ ಇವರು ಫಾರ್ಮ್ ಗೆ ಬಂದಲ್ಲಿ ಇವರೇ ಮೊದಲ ಆಯ್ಕೆ ಆಲ್ ರೌಂಡರ್ ಆಗುತ್ತಾರೆ.