ಪಾಕಿಸ್ತಾನದ ಹಾಲಿ ಹಾಗೂ ಮಾಜಿ ಆಟಗಾರರು ಭಾರತದ ಆಟಗಾರರ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದು ಹೊಸದೇನಲ್ಲ. ಮತ್ತೊಮ್ಮೆ ಇಂತದ್ದೇ ಹೋಲಿಕೆ ಮಾಡಿರುವ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್(Salman Butt), ಪಾಕ್ ತಂಡದ ವೇಗಿ ಶಾಹೀನ್ ಆಫ್ರಿದಿ(Shaheen Afridi) ಭಾರತದ ಜಸ್ಪ್ರೀತ್ ಬುಮ್ರಾ(Jasprit Bumrah) ಅವರಿಗಿಂತ ಕಡಿಮೆಯಿಲ್ಲ ಎಂದಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಸಲ್ಮಾನ್ ಬಟ್, ವೇಗಿ ಶಾಹೀನ್ ಅಫ್ರಿದಿ, ಜಸ್ಪ್ರೀತ್ ಬುಮ್ರಾಗೆ ಸರಿಸಮಾನರಾಗಿದ್ದಾರೆ. 22 ವರ್ಷದ ಎಡಗೈ ವೇಗದ ಬೌಲರ್ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಮತ್ತು ಉತ್ತಮ ಅನುಭವಿ ಬೌಲರ್ ಆಗಿದ್ದಾರೆ. ಅದ್ಭುತ ವೇಗದೊಂದಿಗೆ ಬೌಲಿಂಗ್ ಮಾಡುವ ಅವರು ತಮ್ಮ ಬೌಲಿಂಗ್‌ಗೆ ವಿಭಿನ್ನ ಕೋನ(Angle) ನೀಡುತ್ತಾರೆ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.
ಶಾಹೀನ್ ಅಫ್ರಿದಿ ಹೆಚ್ಚಿನ ಕ್ರಿಕೆಟ್ ಆಡಿಲ್ಲ, ಆದರೆ ಅವರು ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರು ಬುಮ್ರಾ ಅವರಿಗಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಅಲ್ಲದೇ ಶಾಹೀನ್ ಅಫ್ರಿದಿ ಹೊಸ ಬಾಲ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯವನ್ನ ಹೊಂದಿದ್ದಾರೆ. ಇಬ್ಬರು ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬೌಲರ್‌ಗಳಾಗಿದ್ದು, ಇಬ್ಬರು ಬೌಲಿಂಗ್ ಮಾಡುವುದನ್ನ ನೋಡುವುದು ಅದ್ಭುತ ಅನುಭವ. ಹೊಸ ಬಾಲ್‌ನಲ್ಲಿ ಅವರಿಬ್ಬರು ಬೌಲಿಂಗ್ ಮಾಡುವುದು ನಿಜಕ್ಕೂ ರೋಮಾಂಚನಕಾರಿ. ಉಳಿದ ಯಾವುದೇ ಬೌಲರ್‌ಗಳ ಬೌಲಿಂಗ್ ನೋಡಿದಾಗ ಇಂತಹ ಅನುಭವ ದೊರೆಯುವುದಿಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ODI ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ, ಭರ್ಜರಿ ಫಾರ್ಮ್‌ನಲ್ಲಿದ್ದರು. ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಬುಮ್ರಾ, 19 ರನ್‌ಗಳಿಗೆ 6 ವಿಕೆಟ್ ಪಡೆಯುವ ಮೂಲಕ ತಮ್ಮ ಕ್ರಿಕೆಟ್ ಜೀವನದ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಬುಮ್ರಾ ಅವರ ಪರಿಣಾಮಕಾರಿ ಬೌಲಿಂಗ್‌ನಿಂದ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅಲ್ಲದೇ ಟೀಂ ಇಂಡಿಯಾದ ಬೌಲಿಂಗ್ ಸ್ಟಾರ್ ಪ್ರದರ್ಶನಕ್ಕೆ ವಿಶ್ವ ಕ್ರಿಕೆಟ್‌ನ ದಿಗ್ಗಜರಾದ ಸಚಿನ್ ತೆಂಡುಲ್ಕರ್, ನಾಸಿರ್ ಹುಸೇನ್ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.