ಟೀಮ್ ಇಂಡಿಯಾದ ಮಾಜಿ ನಾಯಕ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ಅವರ ಹೆಸರಲ್ಲಿ ಅದೆಷ್ಟೋ ದಾಖಲೆಗಳು ಇವೆ. ಈ ದಾಖಲೆಗಳನ್ನು ಹೇಳುತ್ತಾ ಸಾಗಿದರೆ ಸಮಯವೇ ಸಾಲದು. ಮೈದಾನಕ್ಕೆ ಧೋನಿ ಗ್ಲೌಸ್ ತೊಟ್ಟ ಇಳಿದರೆ ದಾಖಲೆ ಅನ್ನುವ ಹಾಗೆ ಆಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲೂ ಧೋನಿ ಮಹಿಮೆ ಆವರಿಸಿದೆ. ಈಗ ಧೋನಿ ಮಾಡಿರುವ ದಾಖಲೆಯ ಹತ್ತಿರಕ್ಕೂ ಯಾವ ಆಟಗಾರ ಬರಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಧೋನಿ ಟಿ20 ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪರ್ ಆಗಿ 200 ಕ್ಯಾಚ್‌ಗಳನ್ನು ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಧೋನಿ 15 ಆಗಸ್ಟ್ 2020 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದರು. ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮಾತ್ರ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಮಾಂಡರ್ ಆಗಿರುವ ಧೋನಿ ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಪಡೆದು ದಾಖಲೆಯ ಪುಟ ಸೇರಿದ್ದಾರೆ.

ಡೆಲ್ಲಿ ತಂಡದ ವಿರುದ್ಧದ ಪಂದ್ಯದಲ್ಲಿ ಧೋನಿ ಎರಡು ಕ್ಯಾಚ್ ಪಡೆದರು. ಇದರಲ್ಲಿ, ಅವರು ಮೊದಲು ರೋವ್ಮನ್ ಪೊವೆಲ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರೆ, ನಂತರ ಶಾರ್ದೂಲ್ ಠಾಕೂರ್ ಅವರ ಎರಡನೇ ಕ್ಯಾಚ್ ಪಡೆದರು. ಇದರೊಂದಿಗೆ, ಅವರು ವಿಕೆಟ್‌ಕೀಪರ್ ಆಗಿ ಟಿ20 ಮಾದರಿಯಲ್ಲಿ ಕ್ಯಾಚ್‌ಗಳ ದ್ವಿಶತಕವನ್ನು ಪೂರ್ಣಗೊಳಿಸಿದರು.

ಇದುವರೆಗೆ ಧೋನಿ ವಿಕೆಟ್ ಕೀಪರ್ ಆಗಿ ಒಟ್ಟು 347 ಟಿ-20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 200 ಕ್ಯಾಚ್ ಗಳನ್ನು ಹಿಡಿದಿದ್ದಾರೆ. ಧೋನಿ ಈ ಎಲ್ಲಾ ಪಂದ್ಯಗಳನ್ನು ಟೀಮ್ ಇಂಡಿಯಾ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದಾರೆ.
347 ಟಿ20 ಪಂದ್ಯಗಳಲ್ಲಿ ಧೋನಿ ಒಟ್ಟು 284 ಬಲಿ ಪಡೆದಿದ್ದಾರೆ. ಈ ವೇಳೆ 84 ಸ್ಟಂಪಿಂಗ್ ಮಾಡಿದ್ದು, ದಾಖಲೆಯಾಗಿದೆ. ಇವರ ಬಳಿಕ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಎರಡನೇ ಹೆಸರು ದಿನೇಶ್ ಕಾರ್ತಿಕ್. ಇವರು ಇದುವರೆಗೆ ವಿಕೆಟ್ ಕೀಪರ್ ಆಗಿ 299 ಟಿ-20 ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ ಅವರು 182 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಕಾರ್ತಿಕ್ 61 ಸ್ಟಂಪಿಂಗ್ ಸೇರಿದಂತೆ ಒಟ್ಟು 243 ವಿಕೆಟ್ ಪಡೆದಿದ್ದಾರೆ.