ಭಾನುವಾರ ಬೆಳಗಿನ ಜಾವ ಕ್ರೀಡಾ ಲೋಕಕ್ಕೆ ದುಃಖದ ಸುದ್ದಿ ಹೊರ ಬಿದ್ದಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ನಿಧನರಾಗಿದ್ದಾರೆ. ಅವರು ಕ್ವೀನ್ಸ್ಲ್ಯಾಂಡ್ನಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಟೌನ್ಸ್ವಿಲ್ಲೆಯಿಂದ 50 ಕಿಲೋಮೀಟರ್ ದೂರದಲ್ಲಿರುವ ಹರ್ವೆ ರೇಂಜ್ನಲ್ಲಿ ಶನಿವಾರ ರಾತ್ರಿ ಸುಮಾರು 11 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಪಘಾತ ಸಂಭವಿಸಿದಾಗ ಸೈಮಂಡ್ಸ್ ಒಬ್ಬರೇ ಕಾರನ್ನು ಚಲಾಯಿಸುತ್ತಿದ್ದರು.
ಅಪಘಾತದ ಸುದ್ದಿ ತಿಳಿದ ತಕ್ಷಣ, ರಕ್ಷಕರು 46 ವರ್ಷದ ಸೈಮಂಡ್ಸ್ ಅನ್ನು ಉಳಿಸಲು ಪ್ರಯತ್ನಿಸಿದರು. ಆದರೆ ಅವರು ಗಂಭೀರವಾದ ಗಾಯಗಳಿಂದ ಸಾವನ್ನಪ್ಪಿದರು. ಅಪಘಾತ ನಡೆದ ಸ್ಥಳದಲ್ಲಿ ವಿಧಿವಿಜ್ಞಾನ ತಂಡ ತನಿಖೆ ನಡೆಸುತ್ತಿದೆ. ಆಂಡ್ರ್ಯೂ ಸೈಮಂಡ್ಸ್ ನಿಧನದ ಸುದ್ದಿ ಆಸ್ಟ್ರೇಲಿಯಾ ಕ್ರಿಕೆಟ್ ಸೇರಿದಂತೆ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ದುಃಖ ತಂದಿದೆ. ಮಾರ್ಚ್ನಲ್ಲಿ ಶೇನ್ ವಾರ್ನ್ ಮತ್ತು ರಾಡ್ ಮಾರ್ಷ್ ಅವರ ದುರಂತ ಸಾವಿನ ನಂತರ ಸೈಮಂಡ್ಸ್ ಈ ವರ್ಷ ಹಠಾತ್ ಸಾವನ್ನಪ್ಪಿದ ಮೂರನೇ ಆಸ್ಟ್ರೇಲಿಯಾದ ಕ್ರಿಕೆಟಿಗರಾಗಿದ್ದಾರೆ.
ಆಂಡ್ರ್ಯೂ ಸೈಮಂಡ್ಸ್ ನಿಧನದ ಸುದ್ದಿ ತಿಳಿದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವವರ ದಂಡೇ ಹರಿದು ಬಂದಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಹಾಗೂ ಮಾಜಿ ಕ್ರಿಕೆಟಿಗ ಜೇಸನ್ ನೀಲ್ ಗಿಲ್ಲೆಸ್ಪಿ ಅವರು ಸೈಮಂಡ್ಸ್ ಸಾವಿನ ಸುದ್ದಿಗೆ ಸಂತಾಪ ಸೂಚಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ತಂಡದ ಸಹ ಆಟಗಾರ ಆಡಮ್ ಗಿಲ್ಕ್ರಿಸ್ಟ್ ಕೂಡ ಸೈಮಂಡ್ಸ್ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.