Pakistan – ಕ್ರಿಕೆಟ್ ಆಡಲು ಪಾಕಿಸ್ತಾನ ಸುರಕ್ಷಿತ ತಾಣವಂತೆ..!

ಭಯೋತ್ವಾದನೆಯ ಆತಂಕದಿಂದ ಪಾಕಿಸ್ತಾನ ಪ್ರವಾಸ ಮಾಡಲು ವಿದೇಶಿ ತಂಡಗಳು ಹಿಂದೇಟು ಹಾಕುತ್ತಿವೆ. ಈಗಾಗಲೇ ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳು ಪಾಕ್ ನೆಲಕ್ಕೆ ಕಾಲಿಡಲು ಕೊನೆ ಕ್ಷಣದಲ್ಲಿ ಹಿಂದೇಟು ಹಾಕಿದ್ದವು.
ಇದೀಗ ಮುಂದಿನ ದಿನಗಳು ಆಸ್ಟ್ರೇಲಿಯಾ ತಂಡ ಪಾಕ್ ಪ್ರವಾಸ ಮಾಡಲಿದೆ. 1998ರ ನಂತರ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕ್ ನೆಲಕ್ಕೆ ಕಾಲಿಡಲಿದೆ. ಆದ್ರೂ ಆಸ್ಟ್ರೇಲಿಯಾ ಆಟಗಾರರು ಕೊನೆಯ ಕ್ಷಣದಲ್ಲಿ ಮನಸ್ಸು ಬದಲಾಯಿಸಿದ್ರೂ ಅಚ್ಚರಿಪಡಬೇಕಾಗಿಲ್ಲ.
ಈ ನಡುವೆ, ಇಂಗ್ಲೆಂಡ್ ನ ಆಟಗಾರ ಆಲೆಕ್ಸ್ ಹೇಲ್ಸ್ ಅವರು ಪಾಕಿಸ್ತಾನದ ಪರ ಬ್ಯಾಟಿಂಗ್ ಮಾಡಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ತಂಡ ಪಾಕ್ ಪ್ರವಾಸವನ್ನು ರದ್ದುಗೊಳಿಸಿರುವುದು ಸರಿಯಾದ ನಿರ್ಧಾರವಲ್ಲ ಎಂದು ಅಲೆಕ್ಸ್ ಹೇಲ್ಸ್ ಅವರು ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಿಂದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ತುಂಬಾನೇ ಸಹಾಯವಾಗಿತ್ತು. ಆದ್ರೆ ಪಾಕ್ ಪ್ರವಾಸ ಮಾಡಲು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಹಿಂದೇಟು ಹಾಕಿರುವುದು ಸರಿಯಾದ ಕ್ರಮವಲ್ಲ ಎಂದು ಅಲೆಕ್ಸ್ ಹೇಲ್ಸ್ ಅಭಿಪ್ರಾಯಪಟ್ಟಿದ್ದಾರೆ.
ಅಲೆಕ್ಸ್ ಹೇಲ್ಸ್ ಅವರು ಸದ್ಯ ಪಿಎಸ್ ಎಲ್ ನಲ್ಲಿ ಆಡುತ್ತಿದ್ದಾರೆ. ಐದನೇ ಆವೃತ್ತಿಯಲ್ಲಿ ಆಡುತ್ತಿರುವ ಅಲೆಕ್ಸ್ ಹೇಲ್ಸ್ ಅವರು ಇಸ್ಲಾಮಾಬಾದ್ ಯುನೈಟೆಡ್ ತಂಡದ ಪರ ಆಡುತ್ತಿದ್ದಾರೆ. ಈ ಹಿಂದೆ ಕರಾಚಿ ಕಿಂಗ್ಸ್ ತಂಡದ ಪರ ಆಡಿದ್ದರು.
ನನಗೆ ಇಲ್ಲಿ ಕ್ರಿಕೆಟ್ ಆಡಲು ಯಾವುದೇ ಸಮಸ್ಯೆಯಾಗಿಲ್ಲ. ಯಾವುದೇ ಆತಂಕವೂ ಇಲ್ಲ. ಇಲ್ಲಿನ ಜನ ಕ್ರಿಕೆಟ್ ಆಟವನ್ನು ಹುಚ್ಚರಂತೆ ಪ್ರೀತಿಸುತ್ತಾರೆ. ಇಲ್ಲಿನ ಆತಿಥ್ಯವೂ ಚೆನ್ನಾಗಿದೆ. ಕ್ರಿಕೆಟ್ ಆಡಲು ಸುರಕ್ಷಿತವಾದ ತಾಣ. ಸುರಕ್ಷತೆಯ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಅಲೆಕ್ಸ್ ಹೇಲ್ಸ್ ಹೇಳಿದ್ದಾರೆ.
ಈಗಾಗಲೇ ಇಸಿಬಿ ಮತ್ತು ಪಿಸಿಬಿ ಮತ್ತೆ ವೇಳಾಪಟ್ಟಿಯನ್ನು ಸಿದ್ದಪಡಿಸಿದೆ. ಈ ವೇಳಾಪಟ್ಟಿಯಂತೆ ಇಂಗ್ಲೆಂಡ್ ತಂಡ ಎರಡು ಬಾರಿ ಪಾಕಿಸ್ತಾನ ಪ್ರವಾಸ ಮಾಡಬೇಕಿದೆ. ಸೆಪ್ಟಂಬರ್ ನಲ್ಲಿ ಏಳು ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ. ನಂತರ ವಿಶ್ವಕಪ್ ಟೂರ್ನಿ ನಡೆಯಲಿದೆ. ಹಾಗೇ ನವೆಂಬರ್ ಡಿಸೆಂಬರ್ ನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿವೆ.