ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳು ಮುಗಿದಿವೆ. ಮೊದಲ ಪಂದ್ಯವನ್ನು ವೆಸ್ಟ್ಇಂಡೀಸ್ ಗೆದ್ದರೆ, 2ನೇ ಪಂದ್ಯದಲ್ಲಿ ಇಂಗ್ಲೆಂಡ್ ರೋಚಕ ಒಂದು ವಿಕೆಟ್ ಜಯ ಪಡೆದಿದೆ. ಕೊನೆಯ 3 ಪಂದ್ಯ ಸರಣಿ ವಿಜೇತರನ್ನು ನಿರ್ಧಾರ ಮಾಡಲಿದೆ.
ಬ್ರಿಡ್ಜ್ಟೌನ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದು ಇಂಗ್ಲೆಂಡ್. ಜೇಸನ್ ರಾಯ್ (45) ಮತ್ತು ಟಾಮ್ ಬಾಂಟನ್ (25) ಬಿರುಸಿನ ಆರಂಭ ತಂದುಕೊಟ್ಟರು. ಮೊಯಿನ್ ಅಲಿ (31) ಮತ್ತು ಕೊನೆಯಲ್ಲಿ ಕ್ರಿಸ್ ಜೋರ್ಡನ್ (27) ರನ್ಗಳಿಸಿದರು. 20 ಓವರ್ಗಳಲ್ಲಿ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು 171 ರನ್ಗಳಿಸಿತು.
ಚೇಸಿಂಗ್ಗೆ ಹೊರಟ ವೆಸ್ಟ್ ಇಂಡೀಸ್ ಬ್ರೆಂಡನ್ ಕಿಂಗ್ (0), ಶೈ ಹೋಪ್ (2), ನಿಕೊಲಸ್ ಪೂರನ್ (24) ಮತ್ತು ಡೆರೆನ್ ಬ್ರಾವೋ (23) ವಿಕೆಟ್ ನ್ನು ಬೇಗನೆ ಕಳೆದುಕೊಂಡಿತು. ಕೈರಾನ್ ಪೊಲಾರ್ಡ್ (1), ಜೇಸನ್ ಹೋಲ್ಡರ್ (1) ಮತ್ತು ಒಡಿಯಾನ್ ಸ್ಮಿತ್ (7) ಕೂಡ ಬೇಗನೆ ನಿರ್ಗಮಿಸಿದರು. ಇಂಗ್ಲೆಂಡ್ 98 ರನ್ಗಳಿಗೆ 8 ವಿಕೆಟ್ ಪಡೆದು ಸುಲಭ ಗೆಲುವಿನ ಲೆಕ್ಕಾಚಾರ ಹಾಕಿತ್ತು.
ಈ ಹಂತದಲ್ಲಿ ಜೊತೆಯಾದ ರೊಮರಿಯೊ ಶೆಫರ್ಡ್ ಮತ್ತು ಅಕಿಲ್ ಹೊಸೈನ್ ಎಲ್ಲಾ ಲೆಕ್ಕಾಚಾರ ಬದಲಿಸಿದರು. ಸಿಕ್ಸರ್ಗಳ ಸುರಿಮಳೆ ಜೊತೆ ಫೋರ್ ಗಳು ಸರಾಗವಾಗಿ ಹರಿದುಬಂದವು. ಕೊನೆಯ ಓವರ್ನಲ್ಲಿ ವಿಂಡೀಸ್ ಗೆಲುವಿಗೆ 30 ರನ್ ಬೇಕಿತ್ತು. ಸಕಿಬ್ ಮಹಮ್ಮದ್ ಎಸೆದ ಆ ಓವರ್ನಲ್ಲಿ ಕೆರಿಬಿಯನ್ನರು 28 ರನ್ ದೋಚಿದರು. ಇಂತಹ ಹೋರಾಟದ ಹೊರತಾಗಿಯೂ ಕೆರಿಬಿಯನ್ಸ್ 1 ರನ್ಗಳ ರೋಚಕ ಸೋಲು ಕಂಡರು. ಶೆಪರ್ಡ್ 28 ಎಸೆತಗಳಲ್ಲಿ 1 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ ಅಜೇಯ 44 ರನ್ಗಳಿಸಿದರೆ, ಹೊಸೈನ್ 16 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿ ನೆರವಿನಿಂದ 44 ರನ್ ಸಿಡಿಸಿ ಅಜೇಯರಾಗುಳಿದರು. ಇಂಗ್ಲೆಂಡ್ನ ಮೊಯಿನ್ ಅಲಿ 3 ವಿಕೆಟ್ ಪಡೆದು ಗೆಲುವಿನಲ್ಲಿ ಮಿಂಚಿದರು.