ಭರವಸೆಯ ಆಟಗಾರ ಓಲಿ ಪೋಪ್ ಹಾಗೂ ಸ್ಟಾರ್ ಆಟಗಾರ ಜೋ ರೂಟ್ ಅವರು ಬಾರಿಸಿದ ಶತಕದ ನೆರವಿನಿಂದ ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ಗೆ ತಿರುಗೇಟು ನೀಡಿದೆ.
ಭಾನುವಾರ 1 ವಿಕೆಟ್ ಗೆ 90 ರನ್ ಗಳಿಂದ ಆಟವನ್ನು ಮುಂದುವರಿಸಿದ ಇಂಗ್ಲೆಂಡ್ ದಿನದಾಟದಂತ್ಯಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗೆ 473 ರನ್ ಗಳ ಸೇರಿಸಿದ್ದು, ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು 80 ರನ್ ಅವಶ್ಯಕತೆ ಇದೆ.

ಎರಡನೇ ವಿಕೆಟ್ ಗೆ ಅಲೆಕ್ಸ್ ಲೀಸ್ ಹಾಗೂ ಓಲಿ ಪೋಪ್ ಜೊತೆಗೂಡಿ 141 ರನ್ ಗಳ ಸೊಗಸಾದ ಜೊತೆಯಾಟವನ್ನು ನೀಡಿತು. ಅಲೆಕ್ಸ್ ಲೀಸ್ 11 ಬೌಂಡರಿ ನೆರವಿನಿಂದ 67 ರನ್ ಬಾರಿಸಿ ಔಟ್ ಆದರು.
ಮೂರನೇ ವಿಕೆಟ್ ಗೆ ಪೋಪ್ ಜೊತೆಗೂಡಿದ ಭರವಸೆಯ ಆಟಗಾರ ಜೋ ರೂಟ್ ಮನಮೋಹಕ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಎದುರಾಳಿ ಬೌಲರ್ ಗಳ ರಣ ತಂತ್ರವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿತು. ಫಲವಾಗಿ ಮೂರನೇ ವಿಕೆಟ್ ಗೆ ಈ ಇಬ್ಬರೂ ಸ್ಟಾರ್ ಆಟಗಾರರು 249 ಎಸೆತಗಳಲ್ಲಿ 187 ರನ್ ಸೇರಿಸಿದರು.

ಓಲಿ ಪೋಪ್ ಮನಮೋಹಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ತಮ್ಮ ನೈಜ ಆಟವನ್ನು ಆಡಿದ ಇವರು 239 ಎಸೆತಗಳಲ್ಲಿ 13 ಬೌಂಡರಿ, 3 ಸಿಕ್ಸರ್ ಸಹಾಯದಿಂದ 145 ರನ್ ಬಾರಿಸಿದರು.
ಆರನೇ ವಿಕೆಟ್ ಗೆ ನಾಯಕ ಬೆನ್ ಸ್ಟೋಕ್ಸ್ ಹಾಗೂ ರೂಟ್ ಜೊತೆಗೂಡಿ 56 ಎಸೆತಗಳಲ್ಲಿ 61 ರನ್ ಸಿಡಿಸಿ ಔಟ್ ಆದರು. ಸ್ಟೋಕ್ಸ್ 46 ರನ್ ಗಳಿಗೆ ಆಟ ಮುಗಿಸಿದರು.

ಪಿಚ್ ಮರ್ಮ ಅರಿತು ಬ್ಯಾಟ್ ಮಾಡಿದ ರೂಟ್ 25 ಬೌಂಡರಿಗಳ ನೆರವಿನಿಂದ ಅಜೇಯ 163 ರನ್ ಸಿಡಿಸಿದ್ದಾರೆ. ಇವರೊಂದಿಗೆ ಬೆನ್ ಫಾಕ್ಸ್ (ಅಜೇಯ 24) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.