ಹೆನ್ರಿಚ್ ಕ್ಲಾಸೇನ್(81) ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನದಿಂದ ಅಬ್ಬರಿಸಿದ ಸೌತ್ ಆಫ್ರಿಕಾ, ಭುವನೇಶ್ವರ್ ಕುಮಾರ್(4/13) ಪರಿಣಾಮಕಾರಿ ಬೌಲಿಂಗ್ ನಡುವೆಯೂ ಭಾರತ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿತು.
ಕಟಕ್‌ನಲ್ಲಿ ನಡೆದ ಉಭಯ ತಂಡಗಳ ಎರಡನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ, ಆಲ್ರೌಂಡ್ ಪ್ರದರ್ಶನ ನೀಡಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ನಲ್ಲಿ 6 ವಿಕೆಟ್‌ಗೆ 148 ರನ್‌ಗಳಿಸಿತು. ಈ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ 18.2 ಓವರ್‌ಗಳಲ್ಲಿ 6 ವಿಕೆಟ್‌ಗೆ 149 ರನ್‌ಗಳಿಸುವ ಮೂಲಕ ಜಯದ ನಗೆಬೀರಿತು. ಈ ಗೆಲುವಿನೊಂದಿಗೆ ಸೌತ್ ಆಫ್ರಿಕನ್ ತಂಡ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು.

ಕೈಕೊಟ್ಟ ಬ್ಯಾಟ್ಸ್‌ಮನ್‌ಗಳು:
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ ಋತುರಾಜ್ ಗಾಯಕ್ವಾಡ್(1) ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ನಂತರ ಜೊತೆಯಾದ ಇಶಾನ್ ಕಿಶನ್ 34 ರನ್(21 ಬಾಲ್, 2 ಬೌಂಡರಿ, 3 ಸಿಕ್ಸ್) ಹಾಗೂ ಶ್ರೇಯಸ್ ಅಯ್ಯರ್ 40 ರನ್(35 ಬಾಲ್, 2 ಬೌಂಡರಿ, 2 ಸಿಕ್ಸ್) ಉತ್ತಮ ಬ್ಯಾಟಿಂಗ್‌ನಿಂದ ತಂಡಕ್ಕೆ ಚೇತರಿಕೆ ನೀಡಿದರು. ಇವರಿಬ್ಬರು ಔಟಾದ ಬಳಿಕ ಬಂದ ನಾಯಕ ರಿಷಬ್ ಪಂತ್(5), ಹಾರ್ದಿಕ್ ಪಾಂಡ್ಯ(9) ಹಾಗೂ ಅಕ್ಸರ್ ಪಟೇಲ್(10) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಕೊನೆ ಹಂತದಲ್ಲಿ ಬಿರುಸಿನ ಆಟವಾಡಿದ ದಿನೇಶ್ ಕಾರ್ತಿಕ್ 30*(21), ಹರ್ಷಲ್ ಪಟೇಲ್(12*) ಉಪಯುಕ್ತ ರನ್ ಕಲೆಹಾಕಿದರು. ಸೌತ್ ಆಫ್ರಿಕಾ ಪರ ಅನ್ರಿಕ್ ನೊಕಿಯೆ(2/36), ರಬಾಡ, ಪರ್ನೇಲ್, ಪ್ರಿಟೋರಿಯಸ್ ಹಾಗೂ ಮಹಾರಾಜ್ ತಲಾ 1 ವಿಕೆಟ್ ಪಡೆದರು.

ಕ್ಲಾಸೇನ್ ʼಕ್ಲಾಸಿಕ್ʼ ಬ್ಯಾಟಿಂಗ್:
ಭಾರತ ನೀಡಿದ 149 ರನ್‌ಗಳ ಪೈಪೋಟಿ ಮೊತ್ತ ಕಲೆಹಾಕಿದ ಸೌತ್ ಆಫ್ರಿಕಾ ಸಹ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಬಂದ ರೀಜಾ಼ ಹೆಂಡ್ರಿಕ್ಸ್(4), ಡ್ವೇನ್ ಪ್ರಿಟೋರಿಯಸ್(4) ಹಾಗೂ ದುಸೇನ್(1) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಪರಿಣಾಮ 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಈ ಹಂತದಲ್ಲಿ ಬಂದ ಹೆನ್ರಿಚ್ ಕ್ಲಾಸೇನ್ 81 ರನ್(46 ಬಾಲ್, 7 ಬೌಂಡರಿ, 5 ಸಿಕ್ಸ್) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತದ ಬೌಲರ್‌ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಕ್ಲಾಸೇನ್, ಬಿರುಸಿನ ಅರ್ಧಶತಕ ಸಿಡಿಸಿ ತಂಡದ ಗೆಲುವಿನ ರೂವಾರಿಯಾದರು. ಕೊನೆ ಹಂತದಲ್ಲಿ ಡೇವಿಡ್ ಮಿಲ್ಲರ್(20*) ರನ್‌ಗಳಿಸಿ ತಂಡವನ್ನ ಗೆಲುವಿನ ದಡಸೇರಿಸಿದರು.

ಭುವಿ ಆಕ್ರಮಣಕಾರಿ ದಾಳಿ:
ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾಕ್ಕೆ ಭುವನೇಶ್ವರ್ ಕುಮಾರ್(4/13) ಬೌಲಿಂಗ್‌ನಲ್ಲಿ ಕೈಹಿಡಿದರು. ಆರಂಭದಿಂದಲೇ ಸ್ವಿಂಗ್ ಹಾಗೂ ಸ್ಲೋ ಬಾಲ್ ಮೂಲಕ ಮಿಂಚಿದ ಭುವಿ, ಆಫ್ರಿಕಾ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು ಪ್ರಯೋಜನವಾಗಲಿಲ್ಲ. ಉಳಿದಂತೆ ಚಹಲ್ ಮತ್ತು ಹರ್ಷಲ್ ಪಟೇಲ್ 1 ವಿಕೆಟ್ ಪಡೆದರು.