ಜಾನಿ ಬೈರ್ಸ್ಟೋವ್(136) ಬಿರುಸಿನ ಶತಕ ಹಾಗೂ ನಾಯಕ ಬೆನ್ ಸ್ಟೋಕ್ಸ್(75*) ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ ನ್ಯೂಜಿ಼ಲೆಂಡ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಅತಿಥೇಯ ಇಂಗ್ಲೆಂಡ್ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ನಾಟಿಂಗ್ಹ್ಯಾಮ್‌ನ ಟ್ರೆಂಟ್‌ಬ್ರಿಡ್ಜ್ ಮೈದಾನದಲ್ಲಿ ನಡೆದ ಪಂದ್ಯದ 5ನೇ ದಿನದಾಟದಲ್ಲಿ ಇಂಗ್ಲೆಂಡ್, ಗೆಲುವಿಗಾಗಿ 299 ರನ್‌ಗಳ ಟಾರ್ಗೆಟ್ ಪಡೆಯಿತು. ಈ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 299 ರನ್‌ಗಳಿಸುವ ಮೂಲಕ ಗೆಲುವಿನ ನಗೆಬೀರಿತು.

ನ್ಯೂಜಿ಼ಲೆಂಡ್ 284ಕ್ಕೆ ಆಲೌಟ್:
4ನೇ ದಿನದಂತ್ಯಕ್ಕೆ 224/7 ರನ್‌ಗಳಿಂದ ಕಡೆಯ ದಿನದಾಟ ಆರಂಭಿಸಿದ ನ್ಯೂಜಿ಼ಲೆಂಡ್, ಡೆರಿಲ್ ಮಿಚೆಲ್(62*) ಅವರ ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ 284 ರನ್‌ಗಳಿಸಿ ಆಲೌಟ್ ಆಯಿತು. ಆ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಪಡೆದ 14 ರನ್‌ಗಳ ಮುನ್ನಡೆಯೊಂದಿಗೆ ಇಂಗ್ಲೆಂಡ್‌ಗೆ 299 ರನ್‌ಗಳ ಟಾರ್ಗೆಟ್ ನೀಡಿತು. ಆಂಗ್ಲರ ಪರ ಜೇಮ್ಸ್ ಆಂಡರ್ಸನ್ 3 ಪಡೆದು ಮಿಂಚಿದರೆ, ಸ್ಟುವರ್ಟ್ ಬ್ರಾಡ್, ಬೆನ್ ಸ್ಟೋಕ್ಸ್ ಹಾಗೂ ಜ್ಯಾಕ್ ಲೀಚ್ ತಲಾ 2 ವಿಕೆಟ್ ಪಡೆದರು.

ಇಂಗ್ಲೆಂಡ್ ಆರಂಭಿಕ ಶಾಕ್:
ಪಂದ್ಯದ ಗೆಲುವಿಗೆ 299 ರನ್‌ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್, ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಜ್ಯಾಕ್ ಕಾರ್ವ್ಲೆ(0) ಬಹುಬೇಗನೆ ನಿರ್ಗಮಿಸಿದರೆ, ನಂತರ ಬಂದ ಓಲ್ಲಿ ಪೋಪ್(18) ಹಾಗೂ ಜೋ ರೂಟ್(3) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ಎಚ್ಚರಿಕೆ ಆಟವಾಡಿದ ಅಲೆಕ್ಸ್ ಕ್ಯಾರಿ(44) ರನ್‌ಗಳಿಸಿ ಔಟಾದರು. ಇದರ ಪರಿಣಾಮ ಇಂಗ್ಲೆಂಡ್ 93/4 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಬೈರ್ಸ್ಟೋವ್-ಸ್ಟೋಕ್ಸ್ ಅಬ್ಬರ:
ಆದರೆ 5ನೇ ವಿಕೆಟ್‌ಗೆ ಜೊತೆಯಾದ ಜಾನಿ ಬೈರ್ಸ್ಟೋವ್(136) ಹಾಗೂ ನಾಯಕ ಬೆನ್ ಸ್ಟೋಕ್ಸ್(75*) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕಿವೀಸ್ ಬೌಲರ್‌ಗಳ ಮೇಲೆ ಹಿಡಿತ ಸಾಧಿಸಿದ ಬೈರ್ಸ್ಟೋವ್, ಬಿರುಸಿನ ಬ್ಯಾಟಿಂಗ್ ಮೂಲಕ 92 ಬಾಲ್‌ಗಳಲ್ಲಿ 14 ಬೌಂಡರಿ, 7 ಸಿಕ್ಸ್ ನೆರವಿನಿಂದ 136 ರನ್‌ಗಳಿಸಿ ಇಂಗ್ಲೆಂಡ್ ಗೆಲುವಿನ ಹೀರೋ ಆಗಿ ಮಿಂಚಿದರು. ಇವರಿಗೆ ಸಾಥ್ ನೀಡಿದ ನಾಯಕ ಬೆನ್ ಸ್ಟೋಕ್ಸ್(75*) ಆಕರ್ಷಕ ಅರ್ಧಶತಕ ಸಿಡಿಸಿ ತಂಡವನ್ನ ಗೆಲುವಿನ ದಡಸೇರಿಸಿದರು. ನ್ಯೂಜಿ಼ಲೆಂಡ್ ಪರ ಟ್ರೆಂಟ್ ಬೋಲ್ಟ್ 3 ವಿಕೆಟ್ ಪಡೆದರೆ, ಟಿಮ್ ಸೌಥಿ ಹಾಗೂ ಮ್ಯಾಟ್ ಹೆನ್ರಿ ತಲಾ 1 ವಿಕೆಟ್ ಪಡೆದರು.
ಆಂಗ್ಲರ ಮಡಿಲಿಗೆ ಸರಣಿ
ಈ ಜಯದೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಅಲ್ಲದೇ ಇನ್ನು ಒಂದು ಪಂದ್ಯ ಬಾಕಿಯಿರುವಂತೆ ಆಂಗ್ಲರ ಪಡೆ, ಸರಣಿ ತನ್ನದಾಗಿಸಿಕೊಂಡಿದೆ. ಉಭಯ ತಂಡಗಳ 3ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಜೂ.23ರಿಂದ ಲೀಡ್ಸ್ ಮೈದಾನದಲ್ಲಿ ನಡೆಯಲಿದೆ.