ʼಸ್ಲೋ ಬಾಲ್ ಸ್ಪೆಷಲಿಸ್ಟ್ʼ ಹರ್ಷಲ್ ಪಟೇಲ್(4/25) ಹಾಗೂ ʼಸ್ಪಿನ್ ಚಾಣಾಕ್ಷʼ ಯುಜು಼ವೇಂದ್ರ ಚಹಲ್(3/20) ಆಕ್ರಮಣಕಾರಿ ಬೌಲಿಂಗ್ ನೆರವಿನಿಂದ ಸೌತ್ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 48 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿತು. ಆದರೆ ಆರಂಭಿಕ ಬ್ಯಾಟ್ಸ್‌ಮನ್‌ಗಳಿಂದ ದೊರೆತ ಅದ್ಭುತ ಪ್ರದರ್ಶನದಿಂದ ಭಾರತ, 20 ಓವರ್‌ಗಳಲ್ಲಿ 5 ವಿಕೆಟ್‌ಗೆ 179 ರನ್‌ಗಳಿಸಿತು. ಸವಾಲು ಬೆನ್ನತ್ತಿದ ಸೌತ್ ಆಫ್ರಿಕಾ 19.1 ಓವರ್‌ನಲ್ಲಿ 131 ರನ್‌ಗಳಿಗೆ ಆಲೌಟ್ ಆಗುವ ಮೂಲಕ 48 ರನ್‌ಗಳ ಸೋಲು ಕಂಡಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಗೆಲುವಿನ ಖಾತೆ ತೆರೆದ ಭಾರತ 1-2ರ ಹಿನ್ನಡೆ ಕಂಡಿದೆ.

ಋತುರಾಜ್-ಕಿಶನ್ ಅಬ್ಬರ:
ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್ 57 ರನ್ (35 ಬಾಲ್, 7 ಬೌಂಡರಿ, 2 ಸಿಕ್ಸ್) ಹಾಗೂ ಇಶಾನ್ ಕಿಶನ್ 54 ರನ್(35 ಬಾಲ್, 5 ಬೌಂಡರಿ, 2 ಸಿಕ್ಸ್) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಸೌತ್ ಆಫ್ರಿಕಾ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಈ ಜೋಡಿ, ಮೊದಲ ವಿಕೆಟ್‌ಗೆ 97 ರನ್‌ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. ನಂತರ ಬಂದ ಶ್ರೇಯಸ್ ಅಯ್ಯರ್(14), ರಿಷಬ್ ಪಂತ್(6) ಹಾಗೂ ದಿನೇಶ್ ಕಾರ್ತಿಕ್(6) ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಆದರೆ ಹಾರ್ದಿಕ್ ಪಾಂಡ್ಯ 31*(21) ಬಿರುಸಿನ ಬ್ಯಾಟಿಂಗ್‌ನಿಂದ ಭಾರತ 20 ಓವರ್‌ಗಳಲ್ಲಿ 179 ರನ್‌ಗಳಿಸಿತು. ಸೌತ್ ಆಫ್ರಿಕಾ ಪರ ಪ್ರಿಟೋರಿಯಸ್ 2, ರಬಾಡ, ಶಮ್ಸಿ ಹಾಗೂ ಮಹಾರಾಜ್ ತಲಾ 1 ವಿಕೆಟ್ ಪಡೆದರು.

ಹರ್ಷಲ್-ಚಹಲ್ ಕಮಾಲ್:
ಭಾರತ ನೀಡಿದ 180 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ, ಹರ್ಷಲ್ ಪಟೇಲ್(4/25) ಹಾಗೂ ಯುಜು಼ವೇಂದ್ರ ಚಹಲ್(3/20) ದಾಳಿಗೆ ತತ್ತರಿಸಿತು. ಆಫ್ರಿಕಾ ಪರ ಆರಂಭಿಕರಾಗಿ ಬಂದ ತೆಂಬಾ ಬವುಮಾ(8) ಬಹುಬೇಗನೆ ಔಟಾದರೆ, ರೀಜಾ಼ ಹೆಂಡ್ರಿಕ್ಸ್(23) ಹಾಗೂ ಡ್ವೇನ್ ಪ್ರಿಟೋರಿಯಸ್(20) ಅಲ್ಪಮೊತ್ತಗಳಿಸಿ ಹೊರ ನಡೆದರು. ನಂತರ ಬಂದ ವ್ಯಾನ್ ದರ್ ದುಸೇನ್(1) ಹಾಗೂ ಡೇವಿಡ್ ಮಿಲ್ಲರ್(3) ಬಹುಬೇಗನೆ ವಿಕೆಟ್ ಒಪ್ಪಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸನ್(29) ಮತ್ತು ವೈನ್ ಪಾರ್ನೆಲ್(22*) ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರು ತಂಡಕ್ಕೆ ಗೆಲುವು ಸಿಗಲಿಲ್ಲ. ಅಂತಿಮವಾಗಿ 19.1 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್ ಆದ ಸೌತ್ ಆಫ್ರಿಕಾ, ಸರಣಿಯಲ್ಲಿ ಮೊದಲ ಸೋಲು ಅನುಭವಿಸಿತು. ಉಭಯ ತಂಡಗಳ ಮುಂದಿನ ಪಂದ್ಯ ಜೂ.17ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ.