ವಿಶ್ವದ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವ ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಈಗ ಟೆಸ್ಟ್ ತಂಡದ ನಾಯಕನೂ ಹೌದು. ಜೋ ರೂಟ್ ಟೆಸ್ಟ್ ಕ್ಯಾಪ್ಟನ್ಸಿಗೆ ವಿದಾಯ ಹೇಳಿದ ಬಳಿಕ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಬೆನ್ ಸ್ಟೋಕ್ಸ್ ರನ್ನು ನಾಯಕನನ್ನಾಗಿ ಮಾಡಿದೆ. ಇದೇ ಖುಷಿಯಲ್ಲಿರುವ ಸ್ಟೋಕ್ಸ್ ಕೌಂಟಿ ಕ್ರಿಕೆಟ್ ನಲ್ಲಿ ಮಿಂಚಿನ ಆಟ ಆಡಿದ್ದಾರೆ. ಅಷ್ಟೇ ಅಲ್ಲ ಒಂದೇ ಓವರ್ನಲ್ಲಿ ಸತತ 5 ಸಿಕ್ಸರ್ ಸಿಡಿಸಿದ್ದಾರೆ.
ಸ್ಟೋಕ್ಸ್ ಡರ್ಹಾಮ್ ಪರ ಆಡುತ್ತಿದ್ದಾರೆ. ವೊರ್ಸಸ್ಟರ್ ಶೈರ್ ವಿರುದ್ಧದ ಪಂದ್ಯದಲ್ಲಿ ಸ್ಟೋಕ್ಸ್ ಬ್ಯಾಟಿಂಗ್ ಆರ್ಭಟಕ್ಕೆ ಬೌಲರ್ ಗಳು ಕಂಗಾಲಾಗಿದ್ದಾರೆ. ಕೇವಲ 64 ಎಸೆತಗಳಲ್ಲಿ ಸ್ಟೋಕ್ಸ್ ಶತಕ ಸಿಡಿಸಿದ್ದರು. ಈ ವೇಳೆ ಜೋಶ್ ಬೇಕರ್ ಅವರ ಒಂದೇ ಓವರ್ ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.
ಸ್ಟೋಕ್ಸ್ ತನ್ನ ಮೊದಲ 50 ರನ್ ಗಳನ್ನು ಪೂರೈಸಲು 47 ಎಸೆತಗಳನ್ನು ತೆಗೆದುಕೊಂಡಿದ್ದರು. ಆದರೆ ನಂತರದ 50 ರನ್ಗಳಿಗೆ ಕೇವಲ 17 ಎಸೆತಗಳನ್ನು ಮಾತ್ರ ಬಳಸಿಕೊಂಡಿದ್ದರು. ಸ್ಟೋಕ್ಸ್ ಆಟದಿಂದ ಡರ್ಹಾಮ್ ಉತ್ತಮ ಮೊತ್ತವನ್ನು ಕಲೆಹಾಕಿದೆ.