ಟಿ20 ವಿಶ್ವಕಪ್ 2022ರ ಚಾಂಪಿಯನ್ ತಂಡವಾಗಿ ಇಂಗ್ಲೆಂಡ್ ಹೊರಹೊಮ್ಮಿದೆ. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಂಗ್ಲರು, 5 ವಿಕೆಟ್ ಗೆಲುವು ಸಾಧಿಸಿ, ಚುಟುಕು ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ. 2010ರಲ್ಲಿ ಮೊದಲ ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿದ್ದ ಆಂಗ್ಲರು 12 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಅಲ್ಲದೆ, 2019ರ ಏಕದಿನ ವಿಶ್ವಕಪ್ ಗೆಲುವಿನ ಬಳಿಕ, ಇದೀಗ ಐಸಿಸಿಯ ಮತ್ತೊಂದು ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
138 ರನ್ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಇಂಗ್ಲೆಂಡ್ 19 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಮೆಲ್ಬೋರ್ನ್ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಪಾಕ್, 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ವೇಗಿಗಳ ದಾಳಿಗೆ ಬಾಬರ್ ಬಳಗ, ಪೆವಿಲಿಯನ್ ಪೆರೇಡ್ ನಡೆಸಿತು. ಬಾಬರ್ 32, ರಿಜ್ವಾನ್ 15, ಮಸೂದ್ 38, ಶಾದಾಬ್ 20 ರನ್ ಗಳಿಸಿದರು. ಇಂಗ್ಲೆಂಡ್ ಪರ ಸ್ಯಾಮ್ ಕರ್ರಾನ್ 3, ಜೋರ್ಡನ್- ರಶೀದ್ ತಲಾ 2 ವಿಕೆಟ್ ಪಡೆದರು.
ಗೆಲ್ಲಲು 138 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಪಾಕ್ ಬೌಲರ್ಗಳ ದಾಳಿಗೆ ಇಂಗ್ಲೆಂಡ್ ಆರಂಭಿಕರು ಪೆವಿಲಿಯನ್ ಪರೇಡ್ ನಡೆಸಿದರು. 10 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 77 ರನ್ ಮಾತ್ರ ಗಳಿಸಿತ್ತು. ನಂತರ ಕ್ರೀಸ್ ಗಿಳಿದ ಬೆನ್ ಸ್ಟೋಕ್ಸ್, ಪಾಕಿಸ್ತಾನದ ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಕೆಚ್ಚೆದೆಯಿಂದ ಬ್ಯಾಟ್ ಬೀಸಿದರು. ಅಲ್ಲದೆ, ಅವರ ಆಟ 2019ರ ವಿಶ್ವಕಪ್ ಫೈನಲ್ ಪಂದ್ಯವನ್ನು ನೆನಪಿಸುವಂತಿತ್ತು. 49 ಎಸೆತಗಳಲ್ಲಿ ಎದುರಿಸಿದ ಸ್ಟೋಕ್ಸ್ 5 ಫೋರ್ ಮತ್ತು 1 ಸಿಕ್ಸರ್ನೊಂದಿಗೆ ಅಜೇಯ 52 ರನ್ ಸಿಡಿಸಿ ತಂಡಕ್ಕೆ ಜಯತಂದುಕೊಟ್ಟರು. ಜೋಸ್ ಬಟ್ಲರ್ (26), ಹ್ಯಾರಿ ಬ್ರೂಕ್ (20) ಮತ್ತು ಮೊಯೀನ್ ಅಲಿ (19) ಕಾಣಿಕೆ ನೀಡಿದರು.
ಟಿ20 ವಿಶ್ವಕಪ್ ಫೈನಲ್ನಲ್ಲಿ ಪಾಕ್ ಪಾಲಿಗೆ ವಿಲನ್ ಆಗಿದ್ದೆ ಇಂಗ್ಲೆಂಡ್ನ ಬೌಲರ್ ಸ್ಯಾಮ್ ಕರ್ರನ್. 4 ಓವರ್ಗಳಲ್ಲಿ ಕೇವಲ 12 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆಯುವ ಮೂಲಕ, ಎದುರಾಳಿ ತಂಡವನ್ನು ಕಟ್ಟಿ ಹಾಕಿದರು. ಡೆತ್ ಓವರ್ಗಳಲ್ಲಿ ಕೇವಲ 7 ರನ್ ನೀಡುವ, ಪಾಕ್ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು. ಇದರೊಂದಿಗೆ ಈ ಬಾರಿಯ T20WCಯಲ್ಲಿ ಅವರು 6 ಪಂದ್ಯಗಳ ಪೈಕಿ ಒಟ್ಟು 13 ವಿಕೆಟ್ ಕಬಳಿಸಿದರು. ಅಲ್ಲದೆ, ಟೂರ್ನಿಯ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮುದರು.
2016 ರಲ್ಲಿ ಫೈನಲ್ ತಲುಪಿದ್ದ ಇಂಗ್ಲೆಂಡ್ಗೆ ಇದೇ ಬೆನ್ ಸ್ಟೋಕ್ಸ್ ಬೌಲಿಂಗ್ ಮಾರಕವಾಗಿತ್ತು. ವೆಸ್ಟ್ ಇಂಡೀಸ್ ಬ್ಯಾಟರ್ ಬ್ರಾಥ್ವೇಟ್ ಸ್ಟೋಕ್ಸ್ಗೆ ಸತತ ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿ ವೆಸ್ಟ್ ಇಂಡೀಸ್ ತಂಡಕ್ಕೆ ಚಾಂಪಿಯನ್ ಮಾಡಿದ್ದರು. ಅಂದಿನ ಸೋಲಿಗೆ ಕಾರಣವಾಗಿದ್ದ ಸ್ಟೋಕ್ಸ್ ಇಂದಿನ ಫೈನಲ್ ಪಂದ್ಯದಲ್ಲಿ ಏಕಾಂಗಿಯಾಗಿ ಬ್ಯಾಟ್ ಮಾಡಿ ಪಂದ್ಯ ಗೆಲ್ಲಿಸಿಕೊಟ್ಟರು.