ವ್ಯಾನ್ ದರ್ ದುಸೇನ್((133) ಭರ್ಜರಿ ಶತಕ, ಐಡೆನ್ ಮಾರ್ಕ್ರಂ(77) ಆಕರ್ಷಕ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್(England) ವಿರುದ್ಧದ ಮೊದಲ ಏಕದಿನ(First ODI) ಪಂದ್ಯದಲ್ಲಿ ಸೌತ್ ಆಫ್ರಿಕಾ(South Africa) 62 ರನ್‌ಗಳ ಗೆಲುವು ಸಾಧಿಸಿದೆ. ಚೆಸ್ಟರ್-ಲೇ-ಸ್ಟ್ರೀಟ್‌ನ ರಿವರ್ಸೈಡ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೌತ್ ಆಫ್ರಿಕಾ ಅದ್ಬುತ ಪ್ರದರ್ಶನ ನೀಡಿತು. ಇದರ ಪರಿಣಾಮ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 333 ರನ್‌ಗಳ ಕಠಿಣ ಮೊತ್ತ ಕಲೆಹಾಕಿತು. ಈ ಸವಾಲನ್ನು ಚೇಸ್ ಮಾಡಿದ ಇಂಗ್ಲೆಂಡ್, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದ 45.5 ಓವರ್‌ಗಳಲ್ಲಿ 271 ರನ್‌ಗಳಿಸಿ ಆಲೌಟ್ ಆಯಿತು. ಈ ಗೆಲುವಿನ ಮೂಲಕ ಸೌತ್ ಆಫ್ರಿಕಾ ಮೂರು ಪಂದ್ಯಗಳ ಸರಣಿ(ODI Series)ಯಲ್ಲಿ 1-0 ಮುನ್ನಡೆ ಸಾಧಿಸಿತು.

ದುಸೇನ್ ಭರ್ಜರಿ ಶತಕ:
ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್(19) ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ನಂತರ ಜೊತೆಯಾದ ಮಲಾನ್(57) ಹಾಗೂ ದುಸೇನ್(133) 2ನೇ ವಿಕೆಟ್‌ಗೆ 109 ರನ್ ಜೊತೆಯಾಟವಾಡಿದರು. ಆದರೆ ಅರ್ಧಶತಕ ಬಾರಿಸಿದ್ದ ಆರಂಭಿಕ ಮಲಾನ್, ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಜೊತೆಯಾದ ದುಸೇನ್ ಹಾಗೂ ಐಡೆನ್ ಮಾರ್ಕ್ರಂ(77) ಸೌತ್ ಆಫ್ರಿಕಾಕ್ಕೆ ಆಸರೆಯಾದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ದುಸೇನ್, ಭರ್ಜರಿ ಶತಕ ಸಿಡಿಸಿ ಮಿಂಚಿದರೆ. ಇವರಿಗೆ ಸಾಥ್ ನೀಡಿದ ಮಾರ್ಕ್ರಂ, ಆಕರ್ಷಕ ಅರ್ಧಶತಕ ಬಾರಿಸಿದರು. ಅಲ್ಲದೇ 3ನೇ ವಿಕೆಟ್‌ಗೆ 151 ರನ್‌ಗಳ ಜೊತೆಯಾಟವಾಡಿದ ಈ ಜೋಡಿ, ತಂಡದ ಮೊತ್ತವನ್ನ 300ರ ಗಡಿದಾಟಿಸಿದರು. ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್(24*) ಹಾಗೂ ಕ್ಲಾಸೆನ್(12) ರನ್‌ಗಳಿಸಿದರು. ಇಂಗ್ಲೆಂಡ್ ಪರ ಲಿವಿಂಗ್‌ಸ್ಟೋನ್ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ರೂಟ್ ವ್ಯರ್ಥ ಹೋರಾಟ:
ಸೌತ್ ಆಫ್ರಿಕಾ ನೀಡಿದ 334 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಇಂಗ್ಲೆಂಡ್‌ಗೆ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಆಸರೆಯಾದರು. ಆರಂಭಿಕರಾಗಿ ಬಂದ ಜೇಸನ್ ರಾಯ್(43) ಹಾಗೂ ಬೈರ್ಸ್ಟೋವ್(63) ಮೊದಲ ವಿಕೆಟ್‌ಗೆ 102 ರನ್ ಜೊತೆಯಾಟವಾಡಿದರು. ನಂತರ ಬಂದ ಜೋ ರೂಟ್(86) ಜವಾಬ್ದಾರಿಯ ಬ್ಯಾಟಿಂಗ್ ಮೂಲಕ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಯಾವುದೇ ಬ್ಯಾಟ್ಸ್‌ಮನ್‌ಗಳು ಆಸರೆಯಾಗಲಿಲ್ಲ. ತಮ್ಮ ಕೊನೆಯ ಏಕದಿನ ಪಂದ್ಯವಾಡಿದ ಬೆನ್ ಸ್ಟೋಕ್ಸ್(5) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಉಳಿದಂತೆ ನಾಯಕ ಜೋಸ್ ಬಟ್ಲರ್(12), ಲಿವಿಂಗ್‌ಸ್ಟೋನ್(10), ಮೊಯಿನ್ ಅಲಿ(3), ಸ್ಯಾಮ್ ಕರ್ರನ್(18), ಕಾರ್ಸ್(14) ಹಾಗೂ ರಶೀದ್(0) ತಂಡಕ್ಕೆ ಆಸರೆಯಾಗಲಿಲ್ಲ.
ಸೌತ್ ಆಫ್ರಿಕಾ ಪರ ಅನ್ರಿಕ್ ನೋಕಿಯಾ(4/53) ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಇವರಿಗೆ ಸಾಥ್ ನೀಡಿದ ತಬ್ರೈಜ಼್ ಶಮ್ಸಿ(2/53), ಮಾರ್ಕ್ರಂ(2/25) ಉತ್ತಮ ಬೌಲಿಂಗ್ ದಾಳಿ ನಡೆಸಿದರು. ಉಳಿದಂತೆ ಮಹಾರಾಜ್ ಮತ್ತು ಎಂಗಿಡಿ ತಲಾ 1 ವಿಕೆಟ್ ಪಡೆದುಕೊಂಡರು. ಸೌತ್ ಆಫ್ರಿಕಾ ಪರ ಭರ್ಜರಿ ಶತಕ ಸಿಡಿಸಿ ಮಿಂಚಿದ ವ್ಯಾನ್ ದರ್ ದುಸೇನ್, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಎರಡು ತಂಡಗಳ ನಡುವಿನ 2ನೇ ಏಕದಿನ ಪಂದ್ಯ ಜು.22ರಂದು ನಡೆಯಲಿದೆ.
ENG v SA 1st ODI: ದುಸೇನ್-ಮಾರ್ಕ್ರಂ ಭರ್ಜರಿ ಬ್ಯಾಟಿಂಗ್