*ENG v NZ: ಕೋವಿಡ್-19 ಸೋಂಕು ಕಾಣಿಸಿಕೊಂಡ ಹಿನ್ನೆಲೆ: 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದ ಕೇನ್ ವಿಲಿಯಂಸನ್
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸೋಲಿನಿಂದ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದ ನ್ಯೂಜಿ಼ಲೆಂಡ್ ತಂಡಕ್ಕೆ ಆಘಾತ ಎದುರಾಗಿದ್ದು, ಕಿವೀಸ್ ತಂಡದ ನಾಯಕ ಕೇನ್ ವಿಲಿಯಂಸನ್ ಅವರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡ ಪರಿಣಾಮ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಅಭ್ಯಾಸದ ವೇಳೆ ಕೋವಿಡ್-19 ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಪರಿಣಾಮ ಕೇನ್ ವಿಲಿಯಂಸನ್ ಗುರುವಾರ ರ್ಯಾಪಿಡ್ ಆ್ಯಂಟಿಜನ್ ಟೆಸ್(RAT)ಗೆ ಒಳಪಟ್ಟಿದ್ದರು. ಈ ವೇಳೆ ವಿಲಿಯಂಸನ್ ಅವರಿಗೆ ಕೋವಿಡ್ ಸೋಂಕು ಇರುವುದು ಧೃಡಪಟ್ಟಿದ್ದು, ಇದೀಗ ಕೇನ್ ವಿಲಿಯಂಸನ್ ಐದು ದಿನಗಳ ಕಾಲ ಐಸೋಲೇಷನ್ ಆಗಲಿದ್ದಾರೆ. ಕೇನ್ ವಿಲಿಯಂಸನ್ ಅವರ ಅಲಭ್ಯತೆ ಹಿನ್ನೆಲೆಯಲ್ಲಿ ಟೀಮ್ ಲಾಥಂ ಅವರು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ತಂಡವನ್ನ ಮುನ್ನಡೆಸಲಿದ್ದಾರೆ.
ಈಗಾಗಲೇ ಗಾಯದ ಸಮಸ್ಯೆಗೆ ಸಿಲುಕಿರುವ ಕಾಲಿನ್ ಡಿ’ಗ್ರ್ಯಾಂಡ್ಹೋಮ್ ನ್ಯೂಜಿ಼ಲೆಂಡ್ ತಂಡದಿಂದ ಹೊರಗುಳಿದಿದ್ದಾರೆ. ಇದೀಗ ಕೇನ್ ವಿಲಿಯಂಸನ್ ಸಹ ಕೋವಿಡ್-19 ಸೋಂಕಿಗೆ ತುತ್ತಾಗಿರುವುದು ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಹೀಗಾಗಿ ಆಟಗಾರರ ಅಲಭ್ಯತೆ ಎದುರಿಸುತ್ತಿರುವ ಕಿವೀಸ್, ಯುವ ಆಟಗಾರ ಹಮೀಶ್ ರುಥರ್ಫಾರ್ಡ್ ಅವರನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಇಂಗ್ಲೆಂಡ್ ಹಾಗೂ ನ್ಯೂಜಿ಼ಲೆಂಡ್ ನಡುವಿನ ಎರಡನೇ ಟೆಸ್ಟ್ ಇಂದಿನಿಂದ(ಜೂ.10) ಆರಂಭವಾಗಲಿದೆ. ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕಿವೀಸ್ ಪಡೆ ಬಲಿಷ್ಠ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ ನ್ಯೂಜ಼ಿಲೆಂಡ್, ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಸಿಡಿಸಿದ ಶತಕದ ನೆರವಿನಿಂದ ಐದು ವಿಕೆಟ್ ಗಳ ಸೋಲು ಕಂಡಿತ್ತು.