ಜಾನಿ ಬೈರ್ಸ್ಟೋವ್(130*) ಭರ್ಜರಿ ಶತಕ ಹಾಗೂ ಜೇಮೀ ಓವರ್ಟನ್(89*) ಚೊಚ್ಚಲ ಅರ್ಧಶತಕದ ನೆರವಿನಿಂದಾಗಿ ಅತಿಥೇಯ ಇಂಗ್ಲೆಂಡ್, ಪ್ರವಾಸಿ ನ್ಯೂಜಿ಼ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ 2ನೇ ದಿನದಾಟದಲ್ಲಿ ಸಮಬಲದ ಪ್ರದರ್ಶನ ನೀಡಿದೆ. ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನದಂದು 5 ವಿಕೆಟ್‌ಗೆ 225 ರನ್‌ಗಳಿಂದ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ಡೆರಿಲ್ ಮಿಚೆಲ್(109) ಶತಕ ಆಸರೆಯಿಂದ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್‌ಗಳಿಸಿತು. ಇದಕ್ಕೆ ಉತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್, 2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 264 ರನ್‌ಗಳಿಸಿದೆ. 65 ರನ್‌ಗಳ ಹಿನ್ನಡೆ ಹೊಂದಿರುವ ಇಂಗ್ಲೆಂಡ್ ಪರ ಬೈರ್ಸ್ಟೋವ್(130*) ಹಾಗೂ ಓವರ್ಟನ್(89*) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮಿಚೆಲ್ ಶತಕದ ಆರ್ಭಟ:
ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಸಂಷ್ಟಕ್ಕೆ ಸಿಲುಕಿದ್ದ ಕಿವೀಸ್‌ಗೆ ಡರೆಲ್ ಮಿಚೆಲ್(109) ಆಸರೆಯಾದರು. ಆಂಗ್ಲರ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಮಿಚೆಲ್, ಪ್ರಸಕ್ತ ಸರಣಿಯ 3ನೇ ಹಾಗೂ ತಮ್ಮ ಟೆಸ್ಟ್ ಜೀವನದ 4ನೇ ಶತಕ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಟಾಮ್ ಬ್ಲಂಡಲ್(55) ಅರ್ಧಶತಕದ ಕಾಣಿಕೆ ನೀಡಿದರು. ನಂತರದಲ್ಲಿ ಬ್ರೇಸ್ವೆಲ್(13), ವ್ಯಾಗ್ನರ್(4) ರನ್‌ಗಳಿಸಿ ವಿಕೆಟ್ ಒಪ್ಪಿಸಿದರೆ. ಟಿಮ್ ಸೌಥಿ(33) ರನ್‌ಗಳ ಉಪಯುಕ್ತ ರನ್‌ಗಳಿಸಿ ತಂಡದ ಮೊತ್ತವನ್ನ 300ರ ಗಡಿದಾಟಿಸಿದರು. ಅಂತಿಮವಾಗಿ ನ್ಯೂಜಿ಼ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 329 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜ್ಯಾಕ್ ಲೀಚ್ 5/100 ವಿಕೆಟ್ ಪಡೆದು ಮಿಂಚಿದರೆ, ಸ್ಟುವರ್ಟ್ ಬ್ರಾಡ್ 3/62 ಉತ್ತಮ ಸಾಥ್ ನೀಡಿದರು.

ಇಂಗ್ಲೆಂಡ್ 55ಕ್ಕೆ 6 ವಿಕೆಟ್:
ಕಿವೀಸ್ ಪಡೆಯನ್ನ 324 ರನ್‌ಗಳಿಗೆ ಕಟ್ಟಿಹಾಕಿದ ಇಂಗ್ಲೆಂಡ್, ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಆರಂಭಿಕರಾದ ಅಲೆಕ್ಸ್ ಲೀಸ್(4), ಝಾಕ್ ಕ್ರಾಲಿ(6), ಒಲ್ಲಿ ಪಾಪ್(5), ಜೋ ರೂಟ್(5), ನಾಯಕ ಬೆನ್ ಸ್ಟೋಕ್ಸ್(18) ಹಾಗೂ ಬೆನ್ ಫೋಕ್ಸ್(0) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಟ್ರೆಂಟ್ ಬೋಲ್ಟ್ 3/73 ಹಾಗೂ ವ್ಯಾಗ್ನರ್ 2/53 ಆಕ್ರಮಣಕಾರಿ ದಾಳಿಗೆ ತತ್ತರಿಸಿದ ಇಂಗ್ಲೆಂಡ್, ಕೇವಲ 55 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಬೈರ್ಸ್ಟೋವ್-ಓವರ್ಟನ್ ಅಬ್ಬರ:
ಅಲ್ಪಮೊತ್ತಕ್ಕೆ ಆಲೌಟ್ ಆಗುವ ಭೀತಿಗೆ ಸಿಲುಕಿದ್ದ ಇಂಗ್ಲೆಂಡ್‌ಗೆ ಜಾನಿ ಬೈರ್ಸ್ಟೋವ್(130*) ಹಾಗೂ ಓವರ್ಟನ್(89*) ಅದ್ಭುತ ಆಟದಿಂದ ನೆರವಾದರು. 7ನೇ ವಿಕೆಟ್‌ಗೆ ಜೊತೆಯಾದ ಈ ಇಬ್ಬರು ಕಿವೀಸ್ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದರು. 7ನೇ ವಿಕೆಟ್‌ಗೆ ಅಜೇಯ 209 ರನ್‌ಗಳ ಜೊತೆಯಾಟವಾಡಿರುವ ಈ ಜೋಡಿ, ಇಂಗ್ಲೆಂಡ್ ತಂಡವನ್ನ ಉತ್ತಮ ಸ್ಥಿತಿಯತ್ತ ಕೊಂಡೊಯ್ದರು. ಬಿರುಸಿನ ಬ್ಯಾಟಿಂಗ್ ಮೂಲಕ ರನ್‌ಗಳಿಸಿದ ಬೈರ್ಸ್ಟೋವ್ ತಮ್ಮ ತವರಿನಂಗಳದಲ್ಲಿ ಶತಕ ಸಿಡಿಸಿ ಮಿಂಚಿದರೆ, ಇವರಿಗೆ ಉತ್ತಮ ಸಾಥ್ ನೀಡಿದ ಓವರ್ಟನ್(89*) ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿ ಮಿಂಚಿದರು. ಪರಿಣಾಮ ಇಂಗ್ಲೆಂಡ್ 2ನೇ ದಿನದಂತ್ಯಕ್ಕೆ 264 ರನ್‌ಗಳಿಸಿದ್ದು, 65 ರನ್ ಹಿನ್ನಡೆಯೊಂದಿಗೆ ದಿನದಾಟ ಆರಂಭಿಸಲಿದೆ.