ಕಳೆದ ಇಂಗ್ಲೆಂಡ್ ಪ್ರವಾಸದ ವೇಳೆ ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಟೆಸ್ಟ್ ಪಂದ್ಯವನ್ನಾಡಲು ಭಾರತ ಸಜ್ಜಾಗಿದ್ದು, ಉಭಯ ತಂಡಗಳ ನಡುವಿನ 5ನೇ ಟೆಸ್ಟ್ ಪಂದ್ಯಕ್ಕೆ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ವೇದಿಕೆ ತಯಾರಾಗಿದೆ. ಆದರೆ ಎಡ್ಜ್‌ಬಾಸ್ಟನ್ ಮೈದಾನ ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಡುವ ಅದೃಷ್ಟದ ಮೈದಾನ ಅಲ್ಲ ಎನ್ನುತ್ತಿದೆ ಇತಿಹಾಸ.
ಅತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕಾಗಿ ಸಜ್ಜಾಗಿರುವ ಟೀಂ ಇಂಡಿಯಾ, ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಆದರೆ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಭಾರತ ತಂಡದ ಸಾಧನೆ ಈ ಎಲ್ಲಾ ನಿರೀಕ್ಷೆಗಳಿಗೆ ತದ್ವಿರುದ್ದವಾಗಿದೆ. ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ಸೃಷ್ಟಿಸುವ ತವಕದಲ್ಲಿರುವ ಭಾರತ ಈವರೆಗೂ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಆಡಿರುವ ಟೆಸ್ಟ್ ಪಂದ್ಯದಲ್ಲಿ ಗೆಲುವನ್ನೇ ಕಂಡಿಲ್ಲ.
ಎಡ್ಜ್‌ಬಾಸ್ಟನ್ ಮೈದಾನದಲ್ಲಿ 1967ರಿಂದ 2018ರವರೆಗೆ ಭಾರತ ಏಳು ಟೆಸ್ಟ್ ಪಂದ್ಯವನ್ನಾಡಿದ್ದು, ಈ ಯಾವುದೇ ಪಂದ್ಯದಲ್ಲೂ ಗೆಲುವಿನ ಸಕ್ಸಸ್ ಕಂಡಿಲ್ಲ. ಆಡಿರುವ 7 ಪಂದ್ಯಗಳಲ್ಲಿ ಮೂರು ಬಾರಿ ಇನ್ನಿಂಗ್ಸ್ ಸೋಲು ಸೇರಿದಂತೆ 6 ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿರುವ ಟೀಂ ಇಂಡಿಯಾ, ಏಕೈಕ ಪಂದ್ಯವನ್ನ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಈ ಎಲ್ಲಾ ಅಂಶಗಳು ಭಾರತದ ವಿರುದ್ಧವಾಗಿದ್ದು, ಹಿಂದಿನ ವೈಫಲ್ಯಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ಹೊಂದಿರುವ ಭಾರತ, ಎಡ್ಜ್‌ಬಾಸ್ಟನ್ ಮೈದಾನದಲ್ಲಿ ತನ್ನ ಮೊದಲ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ.
ಭಾರತದ ಟೆಸ್ಟ್ ಫಲಿತಾಂಶ-ಎಡ್ಜ್‌ಬಾಸ್ಟನ್‌ನಲ್ಲಿ
1967 – 132 ರನ್‌ಗಳ ಸೋಲು
1974 – ಇನ್ನಿಂಗ್ಸ್ & 78 ರನ್‌ಗಳ ಸೋಲು
1979 – ಇನ್ನಿಂಗ್ಸ್ & 83 ರನ್‌ಗಳ ಸೋಲು
1986 – ಡ್ರಾ
1996 – 8 ವಿಕೆಟ್‌ಗಳ ಸೋಲು
2011 – ಇನ್ನಿಂಗ್ಸ್ ಮತ್ತು 242 ರನ್‌ಗಳ ಸೋಲು
2018 – 31 ರನ್‌ಗಳ ಸೋಲು