ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾದ 18 ಮಂದಿ ಆಟಗಾರರ ತಂಡವನ್ನ ಬಿಸಿಸಿಐ ಪ್ರಕಟಿಸಿದ್ದು, ಮೂರು ಪಂದ್ಯಗಳ ಸರಣಿಗೆ ಎರಡು ವಿಭಿನ್ನ ತಂಡವನ್ನ ಪ್ರಕಟಿಸಲಾಗಿದೆ.
ಅತಿಥೇಯ ಆಂಗ್ಲರ ವಿರುದ್ಧ ನಡೆಯಲಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಹಾಗೂ ಜಸ್ಪ್ರೀತ್ ಬುಮ್ರಾ ಅವರುಗಳಿಗೆ ಮೊದಲ ಟಿ20 ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಆದರೆ ಉಳಿದ ಎರಡು ಟಿ20 ಪಂದ್ಯಗಳಿಗೆ ಈ ಎಲ್ಲಾ ಆಟಗಾರರನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಅಲ್ಲದೇ ಎರಡು ಮತ್ತು ಮೂರನೇ ಟಿ20 ಪಂದ್ಯಕ್ಕಾಗಿ ಪ್ರಕಟಿಸಿರುವ ಭಾರತ ತಂಡದಲ್ಲಿ ರವೀಂದ್ರ ಜಡೇಜಾ ಕಾಣಿಸಿಕೊಂಡಿದ್ದರೆ. ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಟಿ20 ಸರಣಿಯಿಂದ ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ತಂಡದ ಮತ್ತೋರ್ವ ಅನುಭವ ವೇಗದ ಬೌಲರ್ ಭುವನೇಶ್ವರ್ ಕುಮಾರ್, ಕೇವಲ ಟಿ20 ಸರಣಿಗೆ ಮಾತ್ರವೇ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದಾರೆ.
ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಮಿಂಚಿದ್ದ ಸ್ಪೀಡ್ ಸ್ಟಾರ್ ಉಮ್ರಾನ್ ಮಲ್ಲಿಕ್, ಇಂಗ್ಲೆಂಡ್ ವಿರದ್ಧದ ಸರಣಿಯಲ್ಲೂ ಅವಕಾಶ ಪಡೆದಿದ್ದಾರೆ. ಆದರೆ ಐರ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದರೂ ತಂಡದಲ್ಲಿ ಆಡುವ ಅವಕಾಶ ಪಡೆಯದ ರಾಹುಲ್ ತ್ರಿಪಾಠಿ, ಆಂಗ್ಲರ ವಿರುದ್ಧದ ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಐರ್ಲೆಂಡ್ ವಿರುದ್ಧದ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ದೀಪಕ್ ಹೂಡ, ಸಂಜೂ ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡು ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಜುಲೈ 7ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಸೌತ್‌ಹ್ಯಾಂಪ್ಟನ್‌ನಲ್ಲಿ ನಡೆದರೆ. ಉಳಿದ ಎರಡು ಪಂದ್ಯಗಳು ಜು.9 ಮತ್ತು 10ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ಮತ್ತು ನಾಟಿಂಗ್ಹ್ಯಾಮ್‌ನಲ್ಲಿ ನಡೆಯಲಿದೆ.
ಭಾರತ ತಂಡ 1ನೇ T20Iಗೆ:
ರೋಹಿತ್ ಶರ್ಮ(ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜೂ ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜು಼ವೇಂದ್ರ ಚಹಲ್, ಅಕ್ಸರ್ ಪಟೇಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ಉಮ್ರಾನ್ ಮಲ್ಲಿಕ್.
ಭಾರತ ತಂಡ 2 ಮತ್ತು 3ನೇ T20Iಗೆ:
ರೋಹಿತ್ ಶರ್ಮ(ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜು಼ವೇಂದ್ರ ಚಹಲ್, ಅಕ್ಸರ್ ಪಟೇಲ್, ರವಿ ಬಿಷ್ಣೋಯಿ, ಜಸ್ಪ್ರೀತ್ ಬುಮ್ರ, ಭುವನೇಶ್ವರ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲ್ಲಿಕ್.