ಸ್ಪೋಟಕ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ ಅವರನ್ನ ಇಂಗ್ಲೆಂಡ್ ವೈಟ್ ಬಾಲ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ತಂಡದ ಯಶಸ್ವಿ ಕ್ಯಾಪ್ಟನ್ ಒಯಾನ್ ಮಾರ್ಗನ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ನೂತನ ನಾಯಕನನ್ನ ಘೋಷಿಸಿದೆ.
ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡದ ಉಪ ನಾಯಕತ್ವದ ಜವಾಬ್ದಾರಿ ಹೊರುತ್ತಿದ್ದ ಬಟ್ಲರ್, ಇದೀಗ ಪೂರ್ಣ ಪ್ರಮಾಣದಲ್ಲಿ ಇಂಗ್ಲೆಂಡ್ ತಂಡದ ನಾಯಕನಾಗಿದ್ದಾರೆ. ಆಂಗ್ಲರಿಗೆ ಏಕದಿನ ಮತ್ತು ಟಿ20 ವಿಶ್ವಕಪ್ ಗೆದ್ದುಕೊಟ್ಟ ಹಾಗೂ ಇಂಗ್ಲೆಂಡ್ ತಂಡದ ಯಶಸ್ವಿ ಕ್ಯಾಪ್ಟನ್ ಎನಿಸಿದ್ದ ಒಯಾನ್ ಮಾರ್ಗನ್, ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ ಅವರಿಗೆ ಇಂಗ್ಲೆಂಡ್ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. “ಒಯಾನ್ ಮಾರ್ಗನ್ ನಂತರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ಜಾಸ್ ಬಟ್ಲರ್ ಆಯ್ಕೆ ಸೂಕ್ತವಾಗಿದ್ದು, ಬಟ್ಲರ್‌ಗೆ ಈ ಸ್ಥಾನ ನೀಡುವಲ್ಲಿ ಯಾವ ಅಚ್ಚರಿಯೂ ಇಲ್ಲ. ಬಟ್ಲರ್ ದಶಕಗಳಿಂದ ಇಂಗ್ಲೆಂಡ್ ತಂಡದಲ್ಲಿ ಆಡುತ್ತಿದ್ದು, ಸ್ಪೋಟಕ ಬ್ಯಾಟಿಂಗ್‌ನಿಂದ ಮಿಂಚುತ್ತಿದ್ದಾರೆ.”
“ತಂಡದ ಎಲ್ಲಾ ಆಟಗಾರರೊಂದಿಗೆ ಜಾಸ್ ಬಟ್ಲರ್ ಉತ್ತಮ ಒಡನಾಟ ಹೊಂದಿದ್ದಾರೆ. ತಮ್ಮ ಕ್ರಿಕೆಟ್ ಬದುಕಿನ ಯಶಸ್ವಿ ಫಾರ್ಮ್‌ನಲ್ಲಿರುವ ಬಟ್ಲರ್, ವಿಶ್ವದ ಶ್ರೇಷ್ಠ ತಂಡಗಳು ಮತ್ತು ಆಟಗಾರರ ಎದುರು ತಮ್ಮ ಟ್ಯಾಲೆಂಟ್ ತೋರುತ್ತಿದ್ದಾರೆ. ಹೀಗಾಗಿ ಹೊಸ ಜವಾಬ್ದಾರಿ ಬಟ್ಲರ್ ಅವರನ್ನ ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದು, ತಮ್ಮ ಸುತ್ತಲಿನ ಇತರೆ ಆಟಗಾರರಿಗೆ ಬಟ್ಲರ್ ಸ್ಪೂರ್ತಿ ನೀಡಲಿದ್ದಾರೆ. ನಾಯಕತ್ವದ ಜವಾಬ್ದಾರಿಯನ್ನ ಪರಿಪೂರ್ಣವಾಗಿ ಬಳಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್, ಈವರೆಗೆ 151 ಏಕದಿನ ಮತ್ತು 88 T20I ಪಂದ್ಯಗಳನ್ನು ಆಡಿದ್ದು, ODIನಲ್ಲಿ 4120 ಹಾಗೂ T20Iನಲ್ಲಿ 2140 ರನ್‌ಗಳಿಸಿದ್ದಾರೆ.