ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿದ ರಿಷಬ್ ಪಂತ್, ಹಲವು ದಾಖಲೆಗಳನ್ನ ಬರೆದಿದ್ದಾರೆ. ಸ್ಪೋಟಕ ಬ್ಯಾಟಿಂಗ್ ಮೂಲಕ ಆಂಗ್ಲರ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಪಂತ್, ಇಂಗ್ಲೆಂಡ್ ನೆಲದಲ್ಲಿ ಎರಡು ಶತಕ ಸಿಡಿಸಿದ ಪ್ರವಾಸಿ ತಂಡದ ಮೊದಲ ವಿಕೆಟ್ ಕೀಪರ್ ಎನಿಸಿದ್ದಾರೆ.
ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ರಿಷಬ್ ಪಂತ್ ಪರಾಕ್ರಮಕ್ಕೆ ಇಂಗ್ಲೆಂಡ್ ಬೌಲರ್‌ಗಳು ಶರಣಾದರು. 98 ರನ್‌ಗಳಿಗೆ 5 ವಿಕೆಟ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಕಣಕ್ಕಿಳಿದ ರಿಷಬ್ ಪಂತ್, ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಎದುರಾಳಿ ತಂಡದ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗಾಗಿ ಮಾಡಿದರು. ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ರಿಷಬ್ ಪಂತ್, ಟೆಸ್ಟ್ ಕ್ರಿಕೆಟ್‌ನಲ್ಲಿ 5ನೇ ಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ಇಂಗ್ಲೆಂಡ್ ನೆಲದಲ್ಲಿ ಎರಡು ಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಆಂಗ್ಲರ ನಾಡಿನಲ್ಲಿ ಈವರೆಗೂ ಪ್ರವಾಸಿ ತಂಡದ 14 ಮಂದಿ ವಿಕೆಟ್ ಕೀಪರ್‌ಗಳು ತಲಾ 1 ಶತಕವನ್ನಷ್ಟೇ ಸಿಡಿಸಿದ್ದಾರೆ. ಆದರೆ 5ನೇ ಟೆಸ್ಟ್‌ನಲ್ಲಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದ ರಿಷಬ್ ಪಂತ್, ಹಲವು ದಿಗ್ಗಜ ವಿಕೆಟ್ ಕೀಪರ್-ಬ್ಯಾಟ್‌ಮನ್‌ಗಳು ಮಾಡದ ಸಾಧನೆ ಮಾಡಿದ್ದಾರೆ.
3ನೇ ಭಾರತೀಯ ಬ್ಯಾಟ್ಸ್‌ಮನ್:
ಟೀಂ ಇಂಡಿಯಾ ಪಾಲಿಗೆ ಎಡ್ಜ್‌ಬಾಸ್ಟನ್ ಅಂಗಳ ಈವರೆಗೂ ಅದೃಷ್ಟದ ಮೈದಾನವಾಗಿಲ್ಲ. ಈ ಮೈದಾನದಲ್ಲಿ ಭಾರತದ 3 ಬ್ಯಾಟ್ಸ್‌ಮನ್‌ಗಳು ಮಾತ್ರವೇ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲಿ ಟೀಂ ಇಂಡಿಯಾದ ʼಕ್ರಿಕೆಟ್ ದೇವರುʼ ಸಚಿನ್ ತೆಂಡುಲ್ಕರ್, ʼರನ್ ಮಷಿನ್ʼ ವಿರಾಟ್ ಕೊಹ್ಲಿ ಜೊತೆಗೆ ಇದೀಗ ರಿಷಬ್ ಪಂತ್ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದರು.
3ನೇ ಗರಿಷ್ಠ ರನ್ ಸ್ಕೋರರ್:
ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರಿಷಬ್ ಪಂತ್, ಕೇವಲ 111 ಬಾಲ್‌ಗಳಲ್ಲಿ 19 ಬೌಂಡರಿ ಮತ್ತು 4 ಸಿಕ್ಸ್‌ಗಳ ಮೂಲಕ 131.5ರ ಸ್ಟ್ರೈಕ್ ರೇಟ್‌ನಲ್ಲಿ 146 ರನ್‌ಗಳಿಸಿ ಔಟಾದರು. ಇದು ಇಂಗ್ಲೆಂಡ್ ನೆಲದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಗಳಿಸಿದ 3ನೇ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. 1950ರಲ್ಲಿ ಕ್ಲೈಯ್ಡ್ ವಾಲ್ಕಟ್(168*) ಮೊದಲ ಸ್ಥಾನದಲ್ಲಿದ್ದರೆ. 2001ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಆಡಂ ಗಿಲ್‌ಕ್ರಿಸ್ಟ್(152) 2ನೇ ಸ್ಥಾನದಲ್ಲಿ ಹಾಗೂ ರಿಷಬ್ ಪಂತ್(146) 3ನೇ ಸ್ಥಾನದಲ್ಲಿದ್ದಾರೆ.