India -england test match – ಟಿ-20 ಅಲ್ಲ…ಟೆಸ್ಟ್ ಮ್ಯಾಚ್..! ಆತ್ಮವಿಶ್ವಾಸವೇ ರಿಷಬ್ ಪಂತ್ ನ ತಾಕತ್ತು…!
ರೋಹಿತ್ ಶರ್ಮಾ ಗೆ ಗಾಯದ ಸಮಸ್ಯೆ.. ಕೆ.ಎಲ್. ರಾಹುಲ್ ಗೂ ನೋವಿನ ಚಿಂತೆ.. ವಿರಾಟ್ ಕೊಹ್ಲಿಗೆ ಏನಾಗಿದೆ ಅಂತ ಗೊತ್ತಿಲ್ಲ.. ಚೇತೇಶ್ವರ ಪೂಜಾರಗೆ ಸಾಕಾಗಿದೆ… ಹಾಗಿದ್ರೆ ಟೆಸ್ಟ್ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ ಮುಂದಿನ ಭವಿಷ್ಯ ಏನು ? ಸಂಕಷ್ಟದಲ್ಲಿ ತಂಡವನ್ನು ಪಾರು ಮಾಡೋದು ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಅದು ರಿಷಬ್ ಪಂತ್. 24ರ ಹರೆಯದ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್. ಹೊಡಿಬಡಿ ಆಟವೇ ರಿಷಬ್ ಪಂತ್ ಅವರ ಸಿದ್ದಾಂತ. ಸಂದರ್ಭ, ಪರಿಸ್ಥಿತಿ, ಸಮಯ ಯಾವುದರ ಬಗ್ಗೆನೂ ತಲೆಕೆಡಿಸಿಕೊಳ್ಳುವುದಿಲ್ಲ. ಕ್ರೀಸ್ ನಲ್ಲಿ ಬ್ಯಾಟ್ ಹಿಡಿದು ನಿಂತ್ರೆ ಪ್ರತಿ ಎಸೆತದಲ್ಲೂ ರನ್ ಬರಲೇಬೇಕು. ಅದು ಕೂಡ ಬೌಂಡ್ರಿ ಮತ್ತು ಸಿಕ್ಸರ್ ಗಳನ್ನು ಸಿಡಿಸಲೇಬೇಕು. ಹೀಗಾಗಿ ರಿಷಬ್ ಪಂತ್ ಕ್ರೀಸ್ ನಲ್ಲಿದ್ದಾಗ ನಂಬಿಕೆ ಇಲ್ಲ. ಯಾಕಂದ್ರೆ ಯಾವಾಗ ಔಟಾಗ್ತಾರೋ ಅನ್ನೋ ಅಂಜಿಕೆಯಂತೂ ಇದೆ. ಆದ್ರೆ ನೆನಪಿಡಿ, ರಿಷಬ್ ಪಂತ್ ಕ್ರೀಸ್ ನಲ್ಲಿದ್ದಷ್ಟು ಸಮಯ ತಂಡದ ರನ್ ನೀರಿನಂತೆ ಹರಿದು ಬರುತ್ತೆ. ಅದು ಟೆಸ್ಟ್ ಪಂದ್ಯವೇ ಆಗಿರಲಿ, ಏಕದಿನ ಪಂದ್ಯವೇ ಆಗಿರಲಿ, ಅಥವಾ ಟಿ-20 ಪಂದ್ಯವೇ ಆಗಿರಲಿ.. ರಿಷಬ್ ಪಂತ್ ಆಟದ ಖದರೇ ಅಂತಹುದ್ದು.
ಹಾಗೇ ನೋಡಿದ್ರೆ, ಹೊಡಿಬಡಿ ಆಟಗಾರ ರಿಷಬ್ ಪಂತ್ ಹೆಚ್ಚು ಹೆಸರು ಮಾಡಿದ್ದು ಟೆಸ್ಟ್ ಕ್ರಿಕೆಟ್ ನಲ್ಲಿ. ಏಕದಿನ ಮತ್ತು ಟಿ-20 ಕ್ರಿಕೆಟ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದ್ರೆ ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ಹೊಡಿಬಡಿ ಆಟದ ಮೂಲಕವೇ ಅದ್ಭುತವಾದ ಆಟವನ್ನು ಆಡಿದ್ದಾರೆ. ಹಲವು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದೀಗ ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ಪಂದ್ಯದಲ್ಲೂ ಆಗಿದ್ದೂ ಅದೇ. 64 ರನ್ ಗೆ ಮೂರು ವಿಕೆಟ್ ಕಳೆದುಕೊಂಡಾಗ ರಿಷಬ್ ಪಂತ್ ಕ್ರೀಸ್ ಗೆ ಆಗಮಿಸಿದ್ದರು. ಪ್ರಮುಖ ಬ್ಯಾಟ್ಸ್ ಮೆನ್ ಗಳು ವಿಫಲರಾದಾಗ ರಿಷಬ್ ಪಂತ್ ಏನು ಮಾಡ್ತಾರೆ ಅನ್ನೋ ಸಣ್ಣ ಸಂದೇಹ ಕೂಡ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದ್ರೂ ಅಚ್ಚರಿ ಏನಿಲ್ಲ.
ಆದ್ರೆ ರಿಷಬ್ ಪಂತ್ ಕ್ರೀಸ್ ನಲ್ಲಿದ್ದಾಗಲೇ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರಿಕೊಂಡ್ರು. ಆಗ ಭಾರತದ ಸ್ಕೋರ್ 98ಕ್ಕೆ 5.
ಆಗ ರಿಷಬ್ ಪಂತ್ ಅವರನ್ನು ಜೊತೆಯಾಗಿದ್ದು ರವೀಂದ್ರ ಜಡೇಜಾ. ಸಂಕಷ್ಟದಲ್ಲಿದ್ದ ತಂಡವನ್ನು ಪಾರು ಮಾಡಲು ಮಾಮೂಲಿಯಾಗಿ ನಿಧಾನಗತಿಯ ಆಟಕ್ಕೆ ಮೊರೆ ಹೋಗುವುದು ಟೆಸ್ಟ್ ಕ್ರಿಕೆಟ್ ನಲ್ಲಿ ವಾಡಿಕೆ.
ಆದ್ರೆ ರಿಷಬ್ ಪಂತ್ ಹಾಗೇ ಮಾಡಲಿಲ್ಲ. ಟೀಮ್ ಇಂಡಿಯಾದ ವಿರುದ್ದ ಮೇಲುಗೈ ಸಾಧಿಸಿದ್ದ ಇಂಗ್ಲೀಷ್ ಬೌಲರ್ ಗಳು ಆತ್ಮವಿಶ್ವಾಸದಿಂದ ಬೀಗುತ್ತಿದ್ದರು. ಇಂಗ್ಲೆಂಡ್ ಬೌಲರ್ ಗಳ ಅಟ್ಟಹಾಸದ ನಡುವೆಯೂ ರಿಷಬ್ ಪಂತ್ ಸ್ಪೋಟಕ ಆಟವನ್ನಾಡಲು ಮುಂದಾದ್ರು. ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಜಾಕ್ ಲೀಚ್ ನಂತಹ ಬೌಲರ್ ಗಳನ್ನು ದಂಡಿಸಿದ್ದ ರೀತಿಯೇ ಅದ್ಭುತವಾಗಿತ್ತು. ಬೌಂಡರಿ ಮತ್ತು ಸಿಕ್ಸರ್ ಗಳನ್ನು ಸಿಡಿಸುತ್ತಾ 89 ಎಸೆತಗಳಲ್ಲಿ ಶತಕದ ಸಂಭ್ರಮವನ್ನು ಆಚರಿಸಿಕೊಂಡ್ರು.
ಈ ನಡುವೆ, ರಿಷಬ್ ಪಂತ್ ಎರಡು ಮೂರು ದಾಖಲೆಗಳನ್ನು ತನ್ನ ಹೆಸರಿಗೆ ಸೇರಿಸಿಕೊಂಡ್ರು. ಟೆಸ್ಟ್ ಕ್ರಿಕೆಟ್ ನಲ್ಲಿ 2000 ರನ್ ದಾಖಲಿಸಿದ್ದ ಕಿರಿಯ ವಿಕೆಟ್ ಕೀಪರ್ ಎಂ¨ ಗೌರವಕ್ಕೂ ಪಾತ್ರರಾದ್ರು. ಅಲ್ಲದೆ ಇಂಗ್ಲೆಂಡ್ ವಿರುದ್ದವೇ ಮೂರು ಶತಕಗಳನ್ನು ದಾಖಲಿಸಿದ ಹಿರಿಮೆಗೆ ಪಾತ್ರರಾದ್ರು. ಇಲ್ಲಿಯ ತನಕ ಐದು ಟೆಸ್ಟ್ ಶತಕಗಳನ್ನು ದಾಖಲಿಸಿದ್ದ ರಿಷಬ್ ಪಂತ್ 146 ರನ್ ಗಳಿಗೆ ತನ್ನ ಮಹೋನ್ನತ ಇನಿಂಗ್ಸ್ ಗೆ ಮಂಗಳ ಹಾಡಿದ್ರು. ಅಲ್ಲದೆ ಆರನೇ ವಿಕೆಟ್ ಗೆ ರವೀಂದ್ರ ಜಡೇಜಾ ಜೊತೆ 222 ರನ್ ಕೂಡ ಕಲೆ ಹಾಕಿದ್ರು. India -england test match – Rishabh Pant’s love affair with England continues
ಒಟ್ಟಿನಲ್ಲಿ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್ ನಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಟೀಮ್ ಇಂಡಿಯಾ ಸಂಕಷ್ಟದಲ್ಲಿದ್ದಾಗ ಮಾತ್ರವಲ್ಲ ಸೋಲಿನ ಭೀತಿಗೆ ಸಿಲುಕಿದ್ದಾಗ ತಂಡವನ್ನು ಗೆಲುವಿನ ದಡ ಸೇರಿಸುವ ತಾಕತ್ತು ರಿಷಬ್ ಪಂತ್ ಗಿದೆ. ರಿಷಬ್ ಪಂತ್ ಅವರ ಬ್ಯಾಟಿಂಗ್ ಅನ್ನು ನೋಡಿದಾಗ ಒಂದು ಕ್ಷಣ ವೀರೇಂದ್ರ ಸೆಹ್ವಾಗ್ ಕೂಡ ನೆನಪಾಗುತ್ತಾರೆ.
ಒಟ್ಟಿನಲ್ಲಿ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತಿದ್ದಾರೆ. ಇದೇ ರೀತಿಯ ಪ್ರದರ್ಶನವನ್ನು ಏಕದಿನ ಮತ್ತು ಟಿ-20 ಕ್ರಿಕೆಟ್ ನಲ್ಲೂ ನೀಡಿದ್ರೆ ಟೀಮ್ ಇಂಡಿಯಾದ ಭವಿಷ್ಯದ ನಾಯಕನಾಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.